ಗುಜರಾತ್‌ನ ವಡೋದರಾದಲ್ಲಿ ಇಪ್ಪತ್ತು ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ಕುಡಿದ ಅಮಲಿನಲ್ಲಿ ವೇಗವಾಗಿ ಕಾರು ಚಲಾಯಿಸಿ ಐದು ಮಂದಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅಪಘಾತಕ್ಕೆ ಮುನ್ನ ಆರೋಪಿ ರಕ್ಷಿತ್ ಚೌರಾಸಿಯಾ ಮತ್ತು ಆತನ ಸ್ನೇಹಿತ ಪ್ರಾಂಶು ಅವರ ಚಟುವಟಿಕೆಗಳನ್ನು ಬಹಿರಂಗಪಡಿಸಿವೆ.
ದೃಶ್ಯಾವಳಿಗಳಲ್ಲಿ ರಕ್ಷಿತ್ ಮತ್ತು ಪ್ರಾಂಶು ಸ್ಕೂಟರ್‌ನಲ್ಲಿ ಸ್ನೇಹಿತನ ಮನೆಗೆ ಬರುವ ದೃಶ್ಯ ಸೆರೆಯಾಗಿದೆ. ರಕ್ಷಿತ್ ಕೈಯಲ್ಲಿ ಬಾಟಲಿಯೊಂದಿದ್ದು ಅದರಲ್ಲಿ ಏನಿದೆ ಎಂಬುದು ಸ್ಪಷ್ಟವಾಗಿಲ್ಲ. ಬಳಿಕ ಕಪ್ಪು ಬಣ್ಣದ ಕಾರು ಮನೆಯ ಮುಂದೆ ಬಂದು ನಿಲ್ಲುತ್ತದೆ. ಪ್ರಾಂಶು ಕಾರಿನಿಂದ ಇಳಿದು ಮನೆಗೆ ಹೋಗುತ್ತಾನೆ. ಸುಮಾರು ನಲವತ್ತೈದು ನಿಮಿಷಗಳ ಕಾಲ ಅಲ್ಲಿ ಕಳೆದ ನಂತರ ಅವರು ಕಾರಿನಲ್ಲಿ ಹೊರಟಿದ್ದಾರೆ. ಆರಂಭದಲ್ಲಿ ಪ್ರಾಂಶು ಕಾರು ಚಲಾಯಿಸುತ್ತಿದ್ದ, ನಂತರ ರಕ್ಷಿತ್ ಚಾಲಕನ ಸೀಟಿಗೆ ಬಂದು ಕುಳಿತಿದ್ದಾನೆ.
ಶುಕ್ರವಾರ ರಕ್ಷಿತ್ ವೇಗವಾಗಿ ಕಾರು ಚಲಾಯಿಸಿ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದ. ಕಾರಿನಿಂದ ಇಳಿದ ರಕ್ಷಿತ್ “ಇನ್ನೊಂದು ರೌಂಡ್, ಇನ್ನೊಂದು ರೌಂಡ್!” ಎಂದು ಕೂಗುತ್ತಿದ್ದ. ಸ್ಥಳೀಯರು ರಕ್ಷಿತ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಮೂಲತಃ ವಾರಣಾಸಿಯವರಾದ ರಕ್ಷಿತ್ ಮತ್ತು ಪ್ರಾಂಶು ಇಬ್ಬರನ್ನೂ ಬಂಧಿಸಲಾಗಿದೆ. ಆದರೆ ರಕ್ಷಿತ್ ತಾನು ಕುಡಿದಿಲ್ಲ ಮತ್ತು ಕಾರು ಕೇವಲ ಐವತ್ತು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎಂದು ಹೇಳಿಕೊಂಡಿದ್ದಾನೆ.
ಪೊಲೀಸರು ರಕ್ಷಿತ್ ಕುಡಿದು ಗಲಾಟೆ ಮಾಡಿದ ಕಾರಣ ಫೆಬ್ರವರಿಯಲ್ಲಿ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.