ಮುಂಬೈನ ಕುರ್ಲಾದಲ್ಲಿ ನಡೆದ ಬೆಸ್ಟ್ ಬಸ್ ಅಪಘಾತದ ಬಳಿಕ ಆತಂಕಕಾರಿ ವಿಡಿಯೋ ಹೊರಬಿದ್ದಿದ್ದು, ದುರಂತದಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ನಂತರ ವ್ಯಕ್ತಿಯೊಬ್ಬ ಮಹಿಳೆಯ ಕೈಯಿಂದ ಚಿನ್ನದ ಬಳೆಗಳನ್ನು ತೆಗೆದಿರುವುದು ಕಂಡುಬಂದಿದೆ.
ನೀಲಿ ಬಣ್ಣದ ಹೆಲ್ಮೆಟ್ ಧರಿಸಿರುವ ವ್ಯಕ್ತಿ, ಮಹಿಳೆಯ ಬಲಗೈಯನ್ನು ಹಿಡಿದುಕೊಂಡು ಮೂರು ಚಿನ್ನದ ಬಳೆಗಳನ್ನು ಒಂದೊಂದಾಗಿ ಕದಿಯುತ್ತಿದ್ದು, ಬದಿಯಲ್ಲಿ ನಿಂತಿರುವ ಒಂದೆರಡು ಪುರುಷರು, ಮಹಿಳೆ ನಿರ್ಜೀವವಾಗಿ, ಕಾರಿನ ಕೆಳಗೆ ಮಲಗಿರುವಾಗ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಏಳು ಜನರಲ್ಲಿ ಮಹಿಳೆಯನ್ನು ಫಾತಿಮಾ ಕನಿಜ್ ಅನ್ಸಾರಿ (55) ಎಂದು ಗುರುತಿಸಲಾಗಿದ್ದು, ಈಕೆ ಎಂಎಸ್ ಅನ್ಸಾರಿ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಎಸ್‌ಜಿ ಬಾರ್ವೆ ಮಾರ್ಗದಲ್ಲಿರುವ ಕಟ್ಟಡದ ಹೊರಗೆ ನಿಂತಿದ್ದಾಗ ಬಸ್ ಆಕೆಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ವೈರಲ್ ವೀಡಿಯೋದಲ್ಲಿ, “ನನ್ನ ಬಳಿ ಅವರ ಮೊಬೈಲ್ ಇದೆ” ಎಂದು ವ್ಯಕ್ತಿ ಹೇಳುವುದನ್ನು ಕೇಳಬಹುದು. ಮಹಿಳೆಗೆ ಸಹಾಯ ಮಾಡುವ ಮತ್ತು ಆಕೆಯ ಆಭರಣಗಳನ್ನು ರಕ್ಷಿಸುವ ನೆಪದಲ್ಲಿ ವ್ಯಕ್ತಿ ಬಳೆಗಳನ್ನು ತೆಗೆದುಕೊಂಡಿದ್ದಾನೆ ಎಂದು ವರದಿಯಾಗಿದೆ.
ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ, ಕುರ್ಲಾ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 303 ಮತ್ತು 315 ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸೋಮವಾರ ರಾತ್ರಿ 9:30 ರ ಸುಮಾರಿಗೆ ಮುಂಬೈನ ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ಬಸ್ ಚಾಲಕ ಎಲೆಕ್ಟ್ರಿಕ್ ಬಸ್‌ನ ನಿಯಂತ್ರಣ ಕಳೆದುಕೊಂಡು ವಾಹನಗಳು ಮತ್ತು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ನಂತರ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 42 ಮಂದಿ ಗಾಯಗೊಂಡಿದ್ದಾರೆ. 20ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ.