ಪುದೀನಾ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ.
ಅಜೀರ್ಣಕ್ಕೆ ಇದೊಂದು ಉತ್ತಮ ಮನೆಮದ್ದು. ಶೀತಕ್ಕೂ ಪರಿಹಾರ ನೀಡುತ್ತದೆ. ಪುದೀನಾ ಎಲೆಗಳನ್ನು ಹಲವು ರೀತಿಯಲ್ಲಿ ನೀವು ಬಳಸಬಹುದು. ಸಲಾಡ್ ಗೆ ಹಾಕಬಹುದು, ಅಥವಾ ಪುದೀನಾ ಚಹಾ ಸೇವಿಸಬಹುದು.
ಪುದೀನಾದಲ್ಲಿ ಆ್ಯಂಟಿ-ಒಕ್ಸಿಡೆಂಟ್ಸ್ ಹಾಗೂ ಫೈಟೋನ್ಯೂಟ್ರಿಯೆಂಟ್ಸ್ ಇರುವುದರಿಂದ ಹೊಟ್ಟೆ ಮತ್ತು ಸ್ನಾಯುಗಳಿಗೆ ಅದು ರಿಲೀಫ್ ನೀಡುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಅಜೀರ್ಣದಂತಹ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ.
ಮೈಗ್ರೇನ್ ಮತ್ತು ತಲೆನೋವಿಗೂ ಪುದೀನಾ ಪರಿಹಾರ ನೀಡುತ್ತದೆ. ಪುದೀನಾ ನೈಸರ್ಗಿಕವಾಗಿಯೇ ಹಿತಕರವಾದ ಗಿಡಮೂಲಿಕೆ. ಉರಿಯೂತ ಮತ್ತು ಉಷ್ಣವನ್ನು ಇದು ಕಡಿಮೆ ಮಾಡುತ್ತದೆ. ತಲೆನೋವು ಮತ್ತು ಮೈಗ್ರೇನ್ ಗೆ ಇವುಗಳೇ ಕಾರಣ.
ಬಾಯಿಯ ಆರೋಗ್ಯವನ್ನೂ ಪುದೀನಾ ಕಾಪಾಡುತ್ತದೆ. ಪುದೀನಾದಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ಶಕ್ತಿಯಿದೆ. ಇದರಿಂದ ಹಲ್ಲುಗಳು ಹಾಳಾಗದಂತೆ ಕಾಪಾಡಿಕೊಳ್ಳಬಹುದು. ನಿಮ್ಮ ನಾಲಿಗೆ ಮತ್ತು ಹಲ್ಲುಗಳನ್ನು ಪುದೀನಾ ಸ್ವಚ್ಛವಾಗಿಡುತ್ತದೆ. ಇದರಿಂದಾಗಿ ಬಾಯಿ ವಾಸನೆಯ ಸಮಸ್ಯೆ ಇರುವುದಿಲ್ಲ.
ಶೀತ ಮತ್ತು ಕೆಮ್ಮಿಗೆ ಕೂಡ ಪುದೀನಾ ಒಳ್ಳೆಯ ಮದ್ದು. ಪುದೀನಾದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳಿರುವುದರಿಂದ ಶೀತ ಮತ್ತು ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.
ಪುದೀನಾ ಸೇವನೆಯಿಂದ ಚರ್ಮದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಮೊಡವೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಯಾವುದಾದ್ರೂ ಕೀಟ ಕಚ್ಚಿದ್ರೆ, ಬೊಬ್ಬೆಗಳೆದ್ದಿದ್ರೆ ಆ ಜಾಗಕ್ಕೆ ಪುದೀನಾ ಹಚ್ಚಿ, ಬೇಗನೆ ವಾಸಿಯಾಗುತ್ತದೆ. ಪುದೀನಾದಲ್ಲಿ ಕ್ಯಾಲ್ಷಿಯಂ, ರಂಜಕ, ವಿಟಮಿನ್ ಸಿ, ಡಿ, ಇ ಮತ್ತು ವಿಟಮಿನ್ ಬಿ ಅಂಶಗಳಿವೆ. ಹಾಗಾಗಿ ನಿಮ್ಮ ಇಮ್ಯೂನಿಟಿಯನ್ನು ಪುದೀನಾ ಹೆಚ್ಚಿಸಬಲ್ಲದು.