ಬೆಂಗಳೂರು: ಅಪ್ರಾಪ್ತರು, ಯುವಕರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿರುವ ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನ ಮಾರಾಟದ ಆನ್ಲೈನ್ ಅಪ್ಲಿಕೇಶನ್ ಗಳಿಗೆ ನಿಷೇಧ ಹೇರಲು ಚಿಂತನೆ ನಡೆದಿದೆ.
ಆನ್ಲೈನ್ ಹೋಂ ಡೆಲಿವರಿ ಅಪ್ಲಿಕೇಶನ್ ಗಳ ವಿರುದ್ಧ ಕ್ರಮಕ್ಕಾಗಿ ಸೈಬರ್ ಕ್ರೈಂ ಇಲಾಖೆಗೆ ಆರೋಗ್ಯ ಇಲಾಖೆ ವತಿಯಿಂದ ಪತ್ರ ಬರೆಯಲಾಗಿದೆ. ಇ- ವಾಣಿಜ್ಯ ವೆಬ್ಸೈಟ್ ಗಳ ವಿರುದ್ಧ ಕಾನೂನು ಕ್ರಮಕ್ಕೆ ಕೋರಲಾಗಿದೆ.
ಬ್ಲಿಂಕಿಟ್, ಝೊಮಾಟೋ, ಸ್ವಿಗ್ಗಿ, ಜೆಪ್ಟೋ, ಬಿಗ್ ಬ್ಯಾಸ್ಕೆಟ್ ಸೇರಿ ಹಲವು ಹೋಮ್ ಡೆಲಿವರಿ ಆ್ಯಪ್ ಗಳಿಂದ ಕೋಪ್ಟಾ ಕಾಂಯ್ದೆ -2003 ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಇದರಿಂದ ಅನೇಕ ದೂರುಗಳು ಕೂಡ ದಾಖಲಾದ ಹಿನ್ನೆಲೆ ಇ-ವಾಣಿಜ್ಯ ವೆಬ್ಸೈಟ್ ಮೇಲೆ ಕಾನೂನು ಕ್ರಮಕ್ಕೆ ಮನವಿ ಮಾಡಲಾಗಿದೆ.
ಹಲವು ಆಪ್ ಗಳು ಆರೋಗ್ಯದ ಎಚ್ಚರಿಕೆ ಸಂದೇಶಗಳಿಲ್ಲದೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿವೆ. ಅಪ್ರಾಪ್ತ ಮಕ್ಕಳು, ಯುವಕರಿಗೆ ವಿಷಕಾರಿ ಕ್ಯಾನ್ಸರ್ ಕಾರಕ ತಂಬಾಕು ಉತ್ಪನ್ನಗಳುನ್ನು ಸುಲಭವಾಗಿ ಸಿಗುತ್ತವೆ. ಇವುಗಳನ್ನು ಸೇವಿಸಲು ಉತ್ತೇಜಿಸಿದಂತಾಗುತ್ತದೆ. ಇಂತಹ ಕಾನೂನುಬಾಹಿರ ಆನ್ಲೈನ್ ವೆಬ್ಸೈಟ್ ಗಳ ಮೇಲೆ ತುರ್ತಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಸೈಬರ್ ಕ್ರೈಮ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಆನ್ಲೈನ್ ಅಪ್ಲಿಕೇಶನ್ ಗಳಲ್ಲಿ ತಂಬಾಕು ಉತ್ಪನ್ನಗಳು ಯುವಕರು, ಮಕ್ಕಳಿಗೆ ಸುಲಭವಾಗಿ ಸಿಗುತ್ತಿದ್ದು, ಇದಕ್ಕೆ ದಾಸರಾಗುತ್ತಿದ್ದಾರೆ. ಹೀಗಾಗಿ ಆನ್ಲೈನ್ ಹೋಂ ಡೆಲಿವರಿ ಆಪ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದು, ಇವುಗಳನ್ನು ನಿಷೇಧಿಸುವಂತೆ ಕೋರಲಾಗಿದೆ.