
ಕಲಬುರಗಿ: ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಗ್ರಾಮವೊಂದರಲ್ಲಿ 16 ವರ್ಷದ ಇಬ್ಬರು ಬಾಲಕರು ಚಾಕು ತೋರಿಸಿ ಬೆದರಿಸಿ 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಘಟನೆಯ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಸಂತ್ರಸ್ತ ಬಾಲಕಿಯ ಪೋಷಕರು ಕಾಳಗಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಾಲಕಿ ಮತ್ತು ಬಾಲಕರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
ಬಾಲಕಿಯ ಪೋಷಕರು ಕೂಲಿ ಮಾಡಲು ಮುಂಬೈಗೆ ಹೋಗಿದ್ದಾರೆ. 9 ಮತ್ತು 10ನೇ ತರಗತಿ ಓದುತ್ತಿರುವ ಸಹೋದರರೊಂದಿಗೆ 6ನೇ ತರಗತಿ ಓದುತ್ತಿರುವ ಬಾಲಕಿ ವಾಸವಾಗಿದ್ದಾಳೆ. ಡಿಸೆಂಬರ್ 7 ಮತ್ತು 10 ರಂದು ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕರು ಮನೆಗೆ ನುಗ್ಗಿ ಚಾಕು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.
ಬಾಲಕಿ ಮೇಲೆ ಬಾಲಕನೊಬ್ಬ ದೌರ್ಜನ್ಯ ಎಸಗುವಾಗ ಗೊತ್ತಾಗದಂತೆ ಮತ್ತೊಬ್ಬ ಬಾಲಕ ವಿಡಿಯೋ ಮಾಡಿಕೊಂಡು ತನ್ನ ಮೊಬೈಲ್ ಗೆ ಕಳುಹಿಸಿಕೊಂಡಿದ್ದು, ಬಳಿಕ ಸ್ನೇಹಿತನ ಮೊಬೈಲ್ ನಿಂದ ವಿಡಿಯೋ ಡಿಲೀಟ್ ಮಾಡಿದ್ದಾನೆ.
ಬಾಲಕನ ಮೊಬೈಲ್ ನಲ್ಲಿ ಲೈಂಗಿಕ ದೌರ್ಜನ್ಯದ ವಿಡಿಯೋ ಇರುವುದು ಬಾಲಕಿಯ ಅಣ್ಣನ ಗಮನಕ್ಕೆ ಬಂದಿದೆ. ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದರಿಂದ ಮುಂಬೈನಿಂದ ಬಂದ ಪೋಷಕರು ಮಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ.