ಬೆಂಗಳೂರು: ಮನೆ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಅಪ್ರಾಪ್ತೆ ಪೋಷಕರೊಂದಿಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಸರ್ಕಾರಿ ವಸತಿ ನಿಲಯದಲ್ಲಿ ಇರಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ನಾಪತ್ತೆಯಾಗಿರುವ ತನ್ನ ಅಪ್ರಾಪ್ತ ಪುತ್ರಿಯನ್ನು ಪತ್ತೆ ಹಚ್ಚಬೇಕು. ತಮ್ಮ ಸುಪರ್ದಿಗೆ ಒಪ್ಪಿಸಬೇಕು ಎಂದು ಕೋರಿ ರಾಮನಗರ ಜಿಲ್ಲೆಯ ಕಲ್ಲೂರಿನ ವ್ಯಕ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆದಿದೆ.
ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಅಪ್ರಾಪ್ತೆಯನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ತಂದೆ, ತಾಯಿಯ ಜೊತೆ ಮರಳಿ ಮನೆಗೆ ತೆರಳುವೆಯಾ ಎಂದು ನ್ಯಾಯ ಪೀಠ ಕೇಳಿದೆ. ಆಕೆ ಪೋಷಕರೊಂದಿಗೆ ಹೋಗಲು ನಿರಾಕರಿಸಿದ್ದಾರೆ. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಪುತ್ರಿ ನಿಮ್ಮ ಜೊತೆಗೆ ನಿರಾಕರಿಸುತ್ತಿದ್ದಾಳೆ ಎಂದು ತಿಳಿಸಿದೆ. ಆಕೆಯನ್ನು ಸರ್ಕಾರಿ ವಸತಿ ನಿಲಯದಲ್ಲಿ ಇರಿಸಲಾಗುವುದು ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥ ಪಡಿಸಲಾಗಿದೆ.
ರಾಮನಗರ ಜಿಲ್ಲೆಯ ಕಲ್ಲೂರುಹಳ್ಳಿಯ ಯುವಕ ಅದೇ ಊರಿನ ಅಪ್ರಾಪ್ತೆಯನ್ನು ಪ್ರೀತಿಸಿ ಏಪ್ರಿಲ್ 15ರಂದು ಮನೆ ಬಿಟ್ಟು ಹೋಗಿದ್ದರು. ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ವ ಇಚ್ಛೆಯಿಂದ ಯುವಕನೊಂದಿಗೆ ಹೋಗಿರುವುದಾಗಿ ಅಪ್ರಾಪ್ತೆ ಹೇಳಿಕೆ ನೀಡಿದ್ದಳು. ಆಕೆ ಅಪ್ರಾಪ್ತೆ ಎನ್ನುವ ಕಾರಣಕ್ಕೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಯುವಕನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಇತ್ತ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಆರ್ಜಿ ಸಲ್ಲಿಸುತ್ತಿದ್ದಂತೆ ಪೊಲೀಸರು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಪ್ರಾಪ್ತೆಯನ್ನು ಸರ್ಕಾರಿ ವಸತಿ ನಿಲಯದಲ್ಲಿ ಇರಿಸಲಾಗುವುದು. ಪೋಷಕರು ಯಾವಾಗ ಬೇಕಾದರೂ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಬಹುದು. ಆಕೆಗೆ ತಮ್ಮ ಜೊತೆಗೆ ಬರುವಂತೆ ಯಾವುದೇ ರೀತಿ ಒತ್ತಡ ಹೇರುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.