ಛತ್ತರ್ಪುರ: ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 12 ವರ್ಷದ ಬಾಲಕ ಗಂಭೀರ ಗಾಯಗೊಂಡಿರುವ ದುರ್ಘಟನೆ ಮಧ್ಯಪ್ರದೇಶದ ಛತ್ತರ್ಪುರದ ಕುರ್ರಾ ಗ್ರಾಮದಲ್ಲಿ ನಡೆದಿದೆ.
ಅಫ್ಜಲ್, ಗಂಭೀರ ಗಾಯಗೊಂಡಿರುವ ಬಾಲಕ. ಕಸದ ತೊಟ್ಟಿಯಲ್ಲಿ ಸಿಕ್ಕಿದ ಮೊಬೈಲ್ ಬ್ಯಾಟರಿಯೊಂದಿಗೆ ಆಟವಾಡುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಬಾಲಕ ಅಫ್ಜಲ್ ಬ್ಯಾಟರಿಯನ್ನು ಲೈವ್ ವೈರ್ನೊಂದಿಗೆ ಜೋಡಿಸಿದ್ದಾನೆ. ಇದರಿಂದ ಸ್ಫೋಟ ಸಂಭವಿಸಿದ್ದು, ಅಫ್ಜಲ್ ತೀವ್ರವಾಗಿ ಗಾಯಗೊಂಡಿರುವುದಾಗಿ ಬಾಲಕನ ತಾಯಿ ರುಖ್ಸಾರ್ ಹೇಳಿದ್ದಾರೆ.
ವರದಿಗಳ ಪ್ರಕಾರ, ಸ್ಫೋಟದ ತೀವ್ರತೆಗೆ ಬ್ಯಾಟರಿ ನುಚ್ಚುನೂರಾಗಿದೆ. ಅಲ್ಲದೆ ಬ್ಯಾಟರಿಯು ಬಾಲಕನ ಹೊಟ್ಟೆಯನ್ನು ಚುಚ್ಚಿದ್ದು, ಇದು ಭಾರೀ ರಕ್ತಸ್ರಾವಕ್ಕೆ ಕಾರಣವಾಗಿದೆ. ಇದೀಗ ಬಾಲಕ ಅಫ್ಜಲ್ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ. ಕಳೆದ ಒಂದು ವಾರದಲ್ಲಿ ವರದಿಯಾದ ಎರಡನೇ ಘಟನೆ ಇದಾಗಿದೆ.