ಶಿವಮೊಗ್ಗ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶರಾವತಿ ನಗರದ ನಿವಾಸಿಯಾಗಿರುವ ಆರೋಪಿ ಬಾಲಕಿಯನ್ನು ಮದುವೆಯಾಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆ, ಅತ್ಯಾಚಾರ, ಬಾಲ್ಯವಿವಾಹ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಬಾಲಕಿ ಎರಡು ವರ್ಷಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದಳು. ಆಸ್ಪತ್ರೆಯ ಸಮೀಪ ಹಣ್ಣು ಮಾರಾಟ ಮಾಡುತ್ತಿದ್ದ ಆರೋಪಿ ತನ್ನನ್ನು ಪ್ರೀತಿಸುವಂತೆ ಬಾಲಕಿಗೆ ಕೋರಿದ್ದಾನಾದರೂ ಆಕೆ ನಿರಾಕರಿಸಿದ್ದಾಳೆ.
ತಾಯಿ ಆರೋಗ್ಯ ಸುಧಾರಿಸಿದ ಬಳಿಕ ಊರಿಗೆ ಮರಳಿದ್ದು, ಕೆಲದಿನಗಳಲ್ಲೇ ತಾಯಿ ಮೃತಪಟ್ಟಿದ್ದಾರೆ. ಸಂಬಂಧಿಕರು ಬಾಲಕಿಯ ಮದುವೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಬಾಲಕಿ ಶಿವಮೊಗ್ಗದಲ್ಲಿ ಪರಿಚಿತನಾಗಿದ್ದ ಆರೋಪಿಗೆ ಫೋನ್ ಮಾಡಿ ಸಮಸ್ಯೆ ಹೇಳಿಕೊಂಡು ರಕ್ಷಣೆಗಾಗಿ ಮನವಿ ಮಾಡಿದ್ದಾಳೆ. ಆತ ಶಿವಮೊಗ್ಗಕ್ಕೆ ಕರೆಸಿಕೊಂಡು ಬಾಲಕಿಯನ್ನು ಮದುವೆಯಾಗಿ ಶರಾವತಿ ನಗರದ ಮನೆಯಲ್ಲಿ ಇಟ್ಟುಕೊಂಡಿದ್ದ. ಈ ಮಾಹಿತಿ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ದಾಳಿಮಾಡಿ ಬಾಲಕಿಯನ್ನು ರಕ್ಷಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.