ಕೋಲ್ಕತ್ತಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಲಾಗಿದೆ.
ಕೋಲ್ಕತ್ತಾದ ತಿಲಜಾಲಾ ಪ್ರದೇಶದಲ್ಲಿ ತನ್ನ ನೆರೆಹೊರೆಯವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ 7 ವರ್ಷದ ಬಾಲಕಿಯ ಸಾವು ಕಂಡಿದ್ದು, ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಶ್ರೀಧರ್ ರಾಯ್ ರಸ್ತೆಯ ನಿವಾಸಿಯಾಗಿದ್ದ ಬಾಲಕಿ ಭಾನುವಾರ ಬೆಳಿಗ್ಗೆ ನಾಪತ್ತೆಯಾಗಿದ್ದಳು. ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ, ಪೊಲೀಸರು ಪ್ರದೇಶದ ಅಪಾರ್ಟ್ಮೆಂಟ್ ಬ್ಲಾಕ್ ನಲ್ಲಿರುವ ಫ್ಲಾಟ್ ವೊಂದರಲ್ಲಿ ಆಕೆಯ ಶವ ಕಂಡುಬಂದಿದೆ. ಅಧಿಕಾರಿಗಳು ಫ್ಲಾಟ್ ಮಾಲೀಕನನ್ನು ಬಂಧಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕಾಣೆಯಾದ ಹುಡುಗಿಯನ್ನು ಹುಡುಕುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ತಿಲಜಾಲ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಉದ್ರಿಕ್ತಗೊಂಡ ಸ್ಥಳೀಯರು ಹಲವಾರು ವಾಹನಗಳನ್ನು ಹಾನಿಗೊಳಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕಾಗಿ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ ಸ್ಥಳೀಯರು ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಿಲಜಾಲ ಪ್ರದೇಶದ ರಸ್ತೆಗಳಲ್ಲಿ ತಡೆ ನಡೆಸಿದರು. ರೈಲು ತಡೆ, ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗಿದೆ. ಮೂರು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಲಾಗಿದ್ದು, ಅವುಗಳಲ್ಲಿ ಒಂದನ್ನು ಸುಟ್ಟು ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.