ಬೆಂಗಳೂರು: ಅಪ್ರಾಪ್ತೆ ಪ್ರಜ್ಞೆ ತಪ್ಪಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಟೈಲರಿಂಗ್ ಕಲಿಯಲು ಬರುತ್ತಿದ್ದ ಬಾಲಕಿಯ ಪ್ರಜ್ಞೆ ತಪ್ಪಿಸುವ ಔಷಧಿ ಕುಡಿಸಿ ಅತ್ಯಾಚಾರ ಎಸಗಲಾಗಿದೆ. ನಂತರ ಬ್ಲಾಕ್ಮೇಲ್ ಮಾಡಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗಿದೆ.
ಟೈಲರಿಂಗ್ ಸೋಗಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯರು ಇಂತಹ ಕೃತ್ಯವೆಸಗಿದ್ದು, ದೂರು ದಾಖಲಾದ 36 ಗಂಟೆಯೊಳಗೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಆರು ಆರೋಪಿಗಳನ್ನು ಹೆಚ್ಎಸ್ಆರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ವರಿ, ಕಲಾವತಿ, ಕೇಶವಮೂರ್ತಿ, ಸತ್ಯರಾಜ್, ರಫೀಕ್, ಶರತ್ ಬಂಧಿತ ಆರೋಪಿಗಳು. ಟೈಲರಿಂಗ್ ಕಲಿಯಲು ಬರುತ್ತಿದ್ದ 16 ವರ್ಷದ ಬಾಲಕಿಗೆ ಕಲಾವತಿ ಮತ್ತು ರಾಜೇಶ್ವರಿ ಬೆದರಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದು, ನೊಂದ ಬಾಲಕಿ ಪೋಷಕರೊಂದಿಗೆ ಹೆಚ್ಎಸ್ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಟೈಲರಿಂಗ್ ಕಲಿಯಲು ಬಂದಿದ್ದ ಬಾಲಕಿಗೆ ರಾಜೇಶ್ವರಿ, ಕಲಾವತಿ ಅವರು ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಕೊಟ್ಟಿದ್ದಾರೆ. ಪರಿಚಿತ ವ್ಯಕ್ತಿ ಕೇಶವಮೂರ್ತಿಯಿಂದ ಅತ್ಯಾಚಾರ ಮಾಡಿಸಿದ್ದು, ಬಳಿಕ ಪೋಷಕರಿಗೆ ಹೇಳುವುದಾಗಿ ಬ್ಲಾಕ್ಮೇಲ್ ಮಾಡಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಿದ್ದಾರೆ. ಈ ಮಹಿಳೆಯರೊಂದಿಗೆ ಸಂಪರ್ಕದಲ್ಲಿದ್ದ ಸತ್ಯರಾಜ್, ಶರತ್, ರಫೀಕ್ ಅವರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.