ಕಲಬುರಗಿ: ಅಫ್ಜಲಪುರ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಸಂಬಂಧಿ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಆಕೆ ಗರ್ಭಿಣಿಯಾಗಿದ್ದಾಳೆ. ನಿಂಬರಗಾ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಆಳಂದ ತಾಲೂಕಿನ ಗ್ರಾಮವೊಂದರ ಬಾಲಕಿ ವಸತಿ ಶಾಲೆಯಲ್ಲಿ ಇದ್ದು, ಹೊಟ್ಟೆ ನೋವು ಎಂದು ತಿಳಿಸಿದ್ದಾಳೆ. ಶಾಲೆಯ ಸಿಬ್ಬಂದಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೋಷಕರು ಮತ್ತು ಸಿಬ್ಬಂದಿ ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸ್ಕ್ಯಾನಿಂಗ್ ನಲ್ಲಿ ಬಾಲಕಿ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಡಿಸೆಂಬರ್ 16ರಂದು ಬಾಲಕಿಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ ಆರೋಪದ ಮೇಲೆ ವಸತಿ ಶಾಲೆಯ ಪ್ರಾಚಾರ್ಯ ಮಲಕಪ್ಪ ಬೀರದಾರ, ವಾರ್ಡನ್ ಜಾವೇದ್ ಪಟೇಲ್ ಅವರನ್ನು ಅಮಾನತು ಮಾಡಲಾಗಿದೆ. ಬಾಲಕಿ ಗರ್ಭಿಣಿಯಾಗಿ ಹೆರಿಗೆಯಾಗುವವರೆಗೂ ಆಕೆಯ ಬಗ್ಗೆ ಯಾರೂ ಗಮನಹರಿಸದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಅಮಾನತು ವಿರೋಧಿಸಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.