ಕೇರಳದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯೊಬ್ಬಳನ್ನು ಅದೇ ಸಮುದಾಯದ 25 ವರ್ಷದ ಯುವಕನಿಗೆ ಮದುವೆ ಮಾಡಿಕೊಟ್ಟ ಪ್ರಸಂಗ ನಡೆದಿದೆ.
ಇದು ’ಬಾಲ್ಯ ವಿವಾಹ’ ಅಪರಾಧವಾಗಿದ್ದು, ಈ ಸಂಬಂಧ ಬಾಲಕಿಯ ಪೋಷಕರು ಮತ್ತು ಮದುವೆ ಆಯೋಜಿಸಿದವರು ಹಾಗೂ ಯುವಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ಕರುವರಕುಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೊಗ್ರಾಫರ್, ಅಡುಗೆ ತಯಾರಿಸಿದವರು, ಅತಿಥಿಗಳನ್ನು ಕೂಡ ಬಾಲ್ಯ ವಿವಾಹ ನಿಷೇಧ ಕಾಯಿದೆ ಅಡಿಯಲ್ಲಿ ಬುಕ್ ಮಾಡಲು ಚಿಂತನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪರಾಯಟ್ಟಾ ತಿಳಿಸಿದ್ದಾರೆ.
ಕಾನೂನು ಪ್ರಕಾರ ಬಾಲ್ಯ ವಿವಾಹ ಅಪರಾಧಕ್ಕೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಜತೆಗೆ ಗರಿಷ್ಠ 10 ಲಕ್ಷ ರೂ. ದಂಡ ಕೂಡ ಕೋರ್ಟ್ ವಿಧಿಸಬಹುದಾಗಿದೆ.
ಒಂದು ವಾರದ ಹಿಂದೆಯೇ ಗೌಪ್ಯವಾಗಿ ಮದುವೆ ಮಾಡಲಾಗಿದ್ದರೂ, ಸುಳಿವು ಸಿಕ್ಕ ಕೂಡಲೇ ಬಾಲಕಿಯ ರಕ್ಷಣಾ ಕಾರ್ಯಾಚರಣೆಯನ್ನು ಪೊಲೀಸರು ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
SHOCKING: ಮಳೆಗೆ ಪ್ರಾರ್ಥಿಸಿ ಅಪ್ರಾಪ್ತ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ
ಸದ್ಯದ ಮಟ್ಟಿಗೆ ಬಾಲಕಿಯ ಮಾನಸಿಕ ಸ್ವಾಸ್ಥ್ಯದ ದೃಷ್ಟಿಯಿಂದ ಪೋಷಕರಿಗೆ ಎಚ್ಚರಿಕೆ ನೀಡಿ, ಅವರ ಬಳಿಯೇ ಬಾಲಕಿಯನ್ನು ಬಿಡಲಾಗಿದೆ. ಯುವಕನನ್ನು ಆತನ ಮನೆಗೆ ಕಳುಹಿಸಲಾಗಿದೆ. ಯಾರನ್ನೂ ಬಂಧಿಸಿಲ್ಲವಾದರೂ ಕುಟುಂಬಸ್ಥರ ಮೇಲೆ ಪೂರ್ಣ ನಿಗಾ ಇರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.