ಬೆಂಗಳೂರು: ಬಾಲಕಿ ಮದುವೆಯಾಗಿ ಮಗುವಿನ ಜನ್ಮಕ್ಕೆ ಕಾರಣವಾಗಿದ್ದ 20 ವರ್ಷದ ಯುವಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ. ತಾಯಿ ಮತ್ತು ಮಗುವಿನ ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತರಾಗಿರುವುದನ್ನು ಗಮನಿಸಿದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ತಮ್ಮ ವಿರುದ್ಧದ ಬಾಲ್ಯ ವಿವಾಹ ಕಾಯ್ದೆಯಡಿ ಹೊರಿಸಿದ ಆರೋಪ ರದ್ದುಗೊಳಿಸಬೇಕೆಂದು ಯುವಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರವರ ಏಕ ಸದಸ್ಯ ಪೀಠ ಪುರಸ್ಕರಿಸಿದೆ.
ಕಾನೂನಿನ ಅರಿವಿಲ್ಲದೆ ಅನಿರೀಕ್ಷಿತವಾಗಿ ಮದುವೆ ನಡೆದಿದೆ. ಪುತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮದುವೆಗೆ ಕಾನೂನುಬದ್ದ ವಯಸ್ಸು ತಲುಪಿದ ಕೂಡಲೇ ದಂಪತಿ ವಿವಾಹ ನೋಂದಾಯಿಸಲಾಗುವುದು ಎಂದು ನ್ಯಾಯಪೀಠಕ್ಕೆ ಬಾಲಕಿ ಮತ್ತು ತಾಯಿ ಜಯಂತಿ ಸಲ್ಲಿಸಿದ್ದಾರೆ.
ಇದನ್ನು ಪರಿಗಣಿಸಿದ ಪೀಠ ಪೋಕ್ಸೋ ಕಾಯ್ದೆಯ ಉದ್ದೇಶ ಅಪ್ರಾಪ್ತರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದಾಗಿದೆ. ಪರಿಣಾಮ ತಿಳಿಯದೇ ಪರಸ್ಪರ ಒಮ್ಮತದಿಂದ ಇಬ್ಬರು ಹದಿಹರೆಯದವರು ಲೈಂಗಿಕ ಸಂಪರ್ಕ ಹೊಂದುವುದು ಅಪರಾಧವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆಂಧ್ರಪ್ರದೇಶದ 20 ವರ್ಷದ ಯುವಕ 16 ವರ್ಷದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಅಪ್ರಾಪ್ತ ಮದುವೆಯಾಗಿದ್ದ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿದ್ದು, ಅದನ್ನು ರದ್ದು ಮಾಡುವಂತೆ ಯುವಕ ಹೈಕೋರ್ಟ್ ಮೊರೆ ಹೋಗಿದ್ದ.