
ಛತ್ತೀಸ್ಗಡದ ರಾಯ್ಪುರದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ದ್ವಿಚಕ್ರವಾಹನದಲ್ಲಿ ಬರುತ್ತಿದ್ದ 16 ವರ್ಷದ ಅಪ್ರಾಪ್ತೆಯೊಬ್ಬಳು ತಾನು ಹಾರ್ನ್ ಮಾಡಿದರೂ ಸಹ ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಮೂಗ ಮತ್ತು ಕಿವುಡನಾಗಿದ್ದ ವಿಕಲಚೇತನ ವ್ಯಕ್ತಿಯನ್ನು ಇರಿದು ಕೊಂದಿದ್ದಾಳೆ.
ಭಾನುವಾರದಂದು ರಾಯ್ಪುರದ ಆಜಾದ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಕಿವುಡನಾಗಿದ್ದ ಕಾರಣ ಸೈಕಲ್ ಮೇಲೆ ಹೋಗುತ್ತಿದ್ದ ಆತನಿಗೆ ಸಹಜವಾಗಿಯೇ ಹಾರ್ನ್ ಮಾಡಿರುವುದು ಕೇಳಿಸಿಲ್ಲ. ಆದರೆ ಅಷ್ಟರಲ್ಲಾಗಲೇ ವಿವೇಚನೆ ಕಳೆದುಕೊಂಡಿದ್ದ ಅಪ್ರಾಪ್ತೆ ತನ್ನ ಬಳಿ ಇದ್ದ ಚಾಕುವಿನಿಂದ ವ್ಯಕ್ತಿಗೆ ಇರಿದು ಸ್ಥಳದಲ್ಲಿಯೇ ಹತ್ಯೆ ಮಾಡಿದ್ದಾಳೆ.
ಇದೀಗ ಅಪ್ರಾಪ್ತೆಯನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಸಹ ವಶಪಡಿಸಿಕೊಂಡಿದ್ದಾರೆ. ಕೊಲೆ, ಅಕ್ರಮವಾಗಿ ಆಯುಧ ಹೊಂದಿದ್ದೂ ಸೇರಿದಂತೆ ವಿವಿಧ ಕಲಂ ಗಳಡಿ ಅಪ್ರಾಪ್ತೆ ವಿರುದ್ಧ ಪ್ರಕರಣ ದಾಖಲಿಸಿ ಆಕೆಯನ್ನು ರಿಮ್ಯಾಂಡ್ ಹೋಂ ಗೆ ಕಳುಹಿಸಲಾಗಿದೆ.