ತಿರುಚ್ಚಿ: ಅಪ್ರಾಪ್ತ ಬಾಲಕಿ ಅವಧಿಪೂರ್ವ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ನಡೆದಿದೆ. 20 ವರ್ಷದ ಯುವಕನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಬಾಲಕಿ ಬುಧವಾರ ತನ್ನ ಮನೆಯಲ್ಲಿ 6 ತಿಂಗಳ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಬಾಲಕಿಯ ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಬಾಲಕಿ ಅಪ್ರಾಪ್ತ ವಯಸ್ಕಳಾಗಿರುವುದು ಕೂಡ ಪತ್ತೆಯಾಗಿದೆ. ನಂತರ ವೈದ್ಯರು ತಿರುಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಎಲ್ಲಾ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ತಾಯಿಯಿಂದ ಮಾಹಿತಿ ಪಡೆದರು.
ಸ್ನ್ಯಾಕ್ಸ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗಿಯ ತಾಯಿಯ ಪ್ರಕಾರ, ಆಕೆಯ ಮಗಳು 11 ನೇ ತರಗತಿಯಲ್ಲಿ ಓದುತ್ತಿದ್ದಳು. ಕಳೆದ ವರ್ಷ ತನ್ನ ಮಗಳನ್ನು ತನ್ನ ಕಂಪನಿಗೆ ಕರೆದೊಯ್ದಿದ್ದು, ಅಲ್ಲಿ ಅಜಿತ್(20) ಭೇಟಿಯಾಗಿ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಿದ್ದರು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಆ ವ್ಯಕ್ತಿ ಸಂತ್ರಸ್ತೆಯನ್ನು ಆಕೆಯ ಅಜ್ಜಿಯ ಮನೆಯಲ್ಲಿ ಭೇಟಿಯಾಗಿ ಏಪ್ರಿಲ್ 10 ಮತ್ತು 14 ರಂದು ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆ ಗರ್ಭಿಣಿಯಾದಳು. ಘಟನೆಯ ಬಗ್ಗೆ ಬಾಲಕಿಯ ತಾಯಿಗೆ ತಿಳಿದಿತ್ತು. ಆದರೆ ಪೊಲೀಸರ ಮುಂದೆ ವಿಷಯವನ್ನು ತರಲು ಅವರು ಹಿಂದೇಟು ಹಾಕಿದರು. ಬುಧವಾರ ಬಾಲಕಿ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಿತ್ ಪರಾರಿಯಾಗಿದ್ದಾನೆ.