ಮುಂಬೈ: ಲೈಂಗಿಕ ಉದ್ದೇಶವಿಲ್ಲದೆ ಬಾಲಕಿ ಕೆನ್ನೆ ಮುಟ್ಟುವುದು ಲೈಂಗಿಕ ದೌರ್ಜನ್ಯ ಎನಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.
ಈ ಕುರಿತಂತೆ ದಾಖಲಾಗಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೀಪ್ ಶಿಂಧೆ ಅವರ ಏಕ ಸದಸ್ಯ ಪೀಠ, ಲೈಂಗಿಕ ಉದ್ದೇಶವಿಲ್ಲದೆ ಬಾಲಕಿ ಕೆನ್ನೆ ಮುಟ್ಟಿರುವುದು ಪೋಕ್ಸೋ ಕಾಯ್ದೆಯಡಿ ವಿವರಿಸಿರುವಂತೆ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಆರೋಪಿತನಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಈ ಅಭಿಪ್ರಾಯ ಕೇವಲ ಜಾಮೀನು ನೀಡಲು ಮಾತ್ರ ಅನ್ವಯವಾಗುತ್ತದೆ. ಆರೋಪಿ ವಿರುದ್ಧದ ತನಿಖೆಗೂ ಇದಕ್ಕೂ ಯಾವುದೇ ಪ್ರಭಾವ ಬೀರದು ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ರಾಬೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವ 46 ವರ್ಷದ ಮೊಹಮ್ಮದ್ ಅಹಮದ್ ಉಲ್ಲಾ ಅಂಗಡಿಗೆ ಬಂದಿದ್ದ 8 ವರ್ಷದ ಬಾಲಕಿಯ ಕೆನ್ನೆ ಮುಟ್ಟಿದ್ದ. ಆತನ ವಿರುದ್ಧ ದೂರು ದಾಖಲಾಗಿ ಕಳೆದ ವರ್ಷ ಜುಲೈನಲ್ಲಿ ಬಂಧಿಸಿ ಮುಂಬೈನ ತಲೋಜಾ ಜೈಲಿಗೆ ಕಳಿಸಲಾಗಿತ್ತು. ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಸಂದೀಪ್ ಶಿಂಧೆ ಲೈಂಗಿಕ ಉದ್ದೇಶವಿಲ್ಲದೆ ಬಾಲಕಿ ಕೆನ್ನೆ ಮುಟ್ಟುವುದು ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಜಾಮೀನು ಮಂಜೂರು ಮಾಡಿದ್ದಾರೆ.