
ಆನ್‌ಲೈನ್ ಆಟ ಆಡುತ್ತಿದ್ದ 10ನೇ ತರಗತಿ ವಿದ್ಯಾರ್ಥಿಗೆ ಬೆದರಿಸಿ ಚಿನ್ನಾಭರಣ ವಸೂಲಿ ಮಾಡಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಅಪ್ರಾಪ್ತರು ಸೇರಿದಂತೆ ಆರು ಮಂದಿಯ ವಿರುದ್ಧ ಪಶ್ಚಿಮ ವಿಭಾಗದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 15 ರಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮುಂಚೆ 6 ತಿಂಗಳಿನಿಂದ ವಿದ್ಯಾರ್ಥಿಯನ್ನು ಆರೋಪಿಗಳು ಬೆದರಿಸಿ ಸುಲಿಗೆ ಮಾಡುತ್ತಿದ್ದರು.
ಪೊಲೀಸರ ಪ್ರಕಾರ, ಇಬ್ಬರು ಬಾಲಾಪರಾಧಿ ಶಂಕಿತರು ಸಂತ್ರಸ್ತ ವಿದ್ಯಾರ್ಥಿಯ ಸಹಪಾಠಿಗಳಾಗಿದ್ದಾರೆ. ಸಂತ್ರಸ್ತ ವಿದ್ಯಾರ್ಥಿ ತನ್ನ ಮೊಬೈಲ್ ಫೋನ್ ನಲ್ಲಿ ಡ್ರೀಮ್ -11 ಮತ್ತು ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂ) ಆಡುತ್ತಿದ್ದಾಗ ಆರೋಪಿಗಳು ಆನ್ ಲೈನ್ ಗೇಮ್ ಆಡುವ ವಿಚಾರವನ್ನು ವಿದ್ಯಾರ್ಥಿಯ ಮನೆಯಲ್ಲಿ ತಿಳಿಸುವುದಾಗಿ ಬೆದರಿಕೆ ಹಾಕಿ ಸುಲಿಗೆ ಮಾಡಲು ಮುಂದಾದರು.
ತನ್ನ ಬಳಿ ಹಣವಿಲ್ಲ ಎಂದು ಸಂತ್ರಸ್ತ ತನ್ನ ಸಹಪಾಠಿಗಳಿಗೆ ಹೇಳಿದಾಗ, ಮನೆಯಿಂದ ಚಿನ್ನಾಭರಣಗಳನ್ನು ತರುವಂತೆ ಕೇಳಿದ್ದಾರೆ. ಆಗ ಹೆದರಿದ ವಿದ್ಯಾರ್ಥಿ 600-700 ಗ್ರಾಂ ಚಿನ್ನಾಭರಣಗಳನ್ನು ಇಬ್ಬರಿಗೆ ನೀಡಿದ್ದರು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.
ಸಂತ್ರಸ್ತನ ತಂದೆ ಗುತ್ತಿಗೆದಾರರಾಗಿದ್ದು ಅವರ ದೂರಿನ ಪ್ರಕಾರ, ಅವರ ಹಿರಿಯ ಮಗಳು ಮತ್ತು ಅಳಿಯ ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದು ತಮ್ಮ ಚಿನ್ನಾಭರಣಗಳನ್ನು ತಂದೆಯ ಮನೆಯಲ್ಲಿ ಇರಿಸಿದ್ದರು. ಅದೇ ರೀತಿ ಅವರ ಎರಡನೇ ಮಗಳು ಕೂಡ ತನ್ನ ಪತಿಯೊಂದಿಗೆ ಲಂಡನ್‌ಗೆ ಹೋದಾಗ ಅಪ್ಪನ ಮನೆಯಲ್ಲಿ ಚಿನ್ನಾಭರಣಗಳನ್ನು ಇರಿಸಿ ಹೋಗಿದ್ದರು.
ಎರಡನೇ ಮಗಳು ಮತ್ತು ಆಕೆಯ ಪತಿ ಇತ್ತೀಚೆಗೆ ಹಿಂದಿರುಗಿ ಆಭರಣಗಳನ್ನು ಪಡೆಯಲು ತಂದೆಯ ಮನೆಗೆ ಬಂದಾದ ಆಭರಣಗಳು ನಾಪತ್ತೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು. ಈ ವೇಳೆ ಮಗನನ್ನು ವಿಚಾರಿಸಿದಾಗ ಆತ ಮೊದಲು ತನಗೇನೂ ಗೊತ್ತಿಲ್ಲ ಎಂಬಂತೆ ವರ್ತಿಸಿದ್ದ. ಬಳಿಕ ಆತನ ಇಬ್ಬರು ಸಹಪಾಠಿಗಳು ಆರು ತಿಂಗಳಿಂದ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬುದನ್ನ ಬಹಿರಂಗಪಡಿಸಿ ಘಟನೆ ವಿವರಿಸಿದ್ದ ಎಂಬುದು ಎಫ್ಐಆರ್ ನಲ್ಲಿ ದಾಖಲಾಗಿದೆ.
ತನಿಖೆಯ ಸಮಯದಲ್ಲಿ, ಇಬ್ಬರು ಅಪ್ರಾಪ್ತ ಶಂಕಿತರು ಚಿನ್ನಾಭರಣಗಳನ್ನು ನಾಲ್ವರು ಆರೋಪಿಗಳಿಗೆ ನೀಡಿ ಅದನ್ನು ಗಿರವಿ ಇಡಲು ಸಹಾಯ ಪಡೆದಿದ್ದರು. ಪ್ರಕರಣದಲ್ಲಿ ನ್ಯಾಯಾಲಯ ನಾಲ್ವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಆಭರಣಗಳನ್ನು ಕರಗಿಸಿ ತಯಾರಿಸಿದ ಎರಡು ಚಿನ್ನದ ಗಟ್ಟಿ ಮತ್ತು ಉಳಿದವುಗಳನ್ನು ಮಾರಾಟ ಮಾಡಿ ಪಡೆದ 23.50 ಲಕ್ಷ ರೂಪಾಯಿ ಹಣವನ್ನು ನಾಲ್ವರು ಶಂಕಿತ ಆರೋಪಿಗಳ ಪೈಕಿ ಇಬ್ಬರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಒಟ್ಟು ಮೌಲ್ಯ 41.50 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಬಾಲಾಪರಾಧಿ ಶಂಕಿತರನ್ನು ಸಮಾಲೋಚಿಸಲಾಗಿದ್ದು ಸ್ಟೇಷನ್ ಜಾಮೀನಿನ ಮೇಲೆ ಬಿಡಲಾಗಿದೆ. ಇತರರನ್ನು ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪದ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.