
ದಾವಣಗೆರೆ: ಸಾರ್ವಜನಿಕ ರಸ್ತೆಯಲ್ಲಿ ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆ ಮಾಡಲು ಕೊಟ್ಟಿದ್ದ ವಾಹನ ಮಾಲೀಕನಿಗೆ ದಾವಣಗೆರೆಯ ಎರಡನೇ ಎ.ಎಸ್.ಸಿ.ಜೆ. ಮತ್ತು ಜೆಎಂಎಫ್ಸಿ ನ್ಯಾಯಾಲಯ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ದಾವಣಗೆರೆಯ ಸರಸ್ವತಿ ಬಡಾವಣೆಯ ನಿವಾಸಿ ಬೈಕ್ ಮಾಲಿಕ ಪ್ರದೀಪ್ ದಂಡ ಪಾವತಿಸಿದ ವ್ಯಕ್ತಿ. ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಚಾಲನೆ ಮಾಡಲು ಅಪ್ರಾಪ್ತನಿಗೆ ಕೊಟ್ಟಿದ್ದು, ಬಾಲಕ ಡೆಂಟಲ್ ಕಾಲೇಜು ರಸ್ತೆಯಲ್ಲಿ ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡುತ್ತಿದ್ದ. ಸಂಚಾರ ಪೊಲೀಸರು ಬೈಕ್ ನಿಲ್ಲಿಸಿ ದಾಖಲೆ ಪರಿಶೀಲಿಸಿದಾಗ ಆತ ಅಪ್ರಾಪ್ತ ಬಾಲಕ ಎನ್ನುವುದು ಗೊತ್ತಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಬೈಕ್ ಮಾಲೀಕನಿಗೆ 25 ಸಾವಿರ ರೂ. ದಂಡ ವಿಧಿಸಿದೆ.