ಕಲಬುರಗಿ: ಎಪಿಎಂಸಿ ವಿಧೇಯಕ ಶೀಘ್ರ ವಾಪಸ್ ಪಡೆಯಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ವಿಧೇಯಕ ವಾಪಸ್ ಪಡೆಯುವ ಬಗ್ಗೆ ರಚಿಸಲಾಗಿದ್ದ ಪರಿಷತ್ ಉಪ ಸಮಿತಿ ವರದಿ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ವಿಧೇಯಕ ವಾಪಸ್ ಪಡೆಯಲಾಗುವುದು ಎಂದು ಹೇಳಿದ್ದಾರೆ.
ಎಪಿಎಂಸಿಯಲ್ಲಿನ ರೈತರು, ವರ್ತಕರು, ಹಮಾಲರ ಅಭಿಪ್ರಾಯ ಪಡೆದುಕೊಳ್ಳಲಾಗಿದ್ದು, ಶೀಘ್ರವೇ ವರದಿ ಸಲ್ಲಿಕೆಯಾಗಲಿದೆ. ಎಪಿಎಂಸಿ ಆವರಣದಲ್ಲಿ ಕೃಷಿಯೇತರ ವ್ಯಾಪಾರ ನಿಷೇಧಿಸಲಾಗಿದೆ. ಎಪಿಎಂಸಿಗಳಲ್ಲಿ ಪ್ರತಿ 100 ವಹಿವಾಟುಗಳಿಗೆ 60ಪೈಸೆ ಸೆಸ್ ದುರ್ಬಳಕೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಇದರಲ್ಲಿ ಸ್ಥಳೀಯ ಏಜೆಂಟರೇ ಭಾಗಿಯಾದ ಆರೋಪವಿದ್ದು, ವಿಚಕ್ಷಣದಳ ರಚಿಸಲಾಗುವುದು. ಹೊಸ ಕಾಯ್ದೆ ಬಂದ ನಂತರ ಎಪಿಎಂಸಿಯ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಂದು ಸಚಿವರು ಹೇಳಿದ್ದಾರೆ.