ಕೊಪ್ಪಳ: ರಸ್ತೆ ಸೌಲಭ್ಯ ಕೇಳಿದ್ದಕ್ಕೆ ಸಚಿವ ಶಿವರಾಜ್ ತಂಗಡಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ ಜೀರಾಳ ಕಲ್ಗುಡಿ ಗ್ರಾಮದಲ್ಲಿ ರಸ್ತೆ ಸೌಲಭ್ಯ ಕೇಳಿದ ಸಚಿವ ಶಿವರಾಜ್ ತಂಗಡಗಿ ಗ್ರಾಮದ ಹಲವರ ನಡುವೆ ಜಟಾಪಟಿ ನಡೆದಿದ್ದು, ಸಚಿವರು ಬಹಿರಂಗವಾಗಿಯೇ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿದೆ.
ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಪ್ಪ ಕುಣಿಕೆರೆ ಹಾಗೂ ಮತ್ತೊಬ್ಬ ಸದಸ್ಯೆಯ ಪ್ರತಿ ಪಾಮಣ್ಣ ಚಲವಾದಿ ಅವರು ಸಚಿವರಿಗೆ ರಸ್ತೆ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದಾಗ ಸಚಿವರು ಸಮಾಧಾನದಿಂದ ಉತ್ತರ ನೀಡಿದ್ದಾರೆ. ಮತ್ತೆ ರಸ್ತೆ ಸೌಲಭ್ಯ ಕಲ್ಪಸಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದಾಗ ಕೆರಳಿದ ಶಿವರಾಜ್ ತಂಗಡಿಗೆ ಜೋರಾಗಿ ಮಾತನಾಡಿದ್ದಾರೆ. ಅಲ್ಲಿದ್ದವರು ಇಬ್ಬರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ.
ನಂತರ ಯಲ್ಲಪ್ಪ ಮತ್ತು ಪಾಮಣ್ಣ ಅವರನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಕರೆದುಕೊಂಡು ಬಂದಿದ್ದು ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಸೌಲಭ್ಯ ಕೇಳಿದ್ದಕ್ಕೆ ಠಾಣೆ ಬೆದರಿಸಿ ಠಾಣೆಗೆ ಕರೆದುಕೊಂಡು ಬರುತ್ತಿರಾ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ರಸ್ತೆ ಸೌಲಭ್ಯ ಕೇಳಿದ ಪಂಚಾಯಿತಿ ಸದಸ್ಯ ದಲಿತ ಸಮುದಾಯದ ವ್ಯಕ್ತಿಯಾಗಿದ್ದಾರೆ. ಸಚಿವರು ಅವಾಚ್ಯ ಪದಗಳಿಂದ ನಿಂದಿಸಿ ಅಧಿಕಾರ ದುರ್ಬಳಕೆ ಮಾಡಿ ದರ್ಪ ತೋರಿದ್ದಾರೆ. ಸಚಿವರನ್ನು ಸೌಲಭ್ಯ ಕೇಳುವುದು ತಪ್ಪಾ ಎಂದು ಠಾಣೆಗೆ ಬಂದ ಬಿಜೆಪಿ ಮಾಜಿ ಶಾಸಕ ಬಸವರಾಜ ದಢೇಸೂಗೂರ ಪ್ರಶ್ನಿಸಿದ್ದಾರೆ. ನಂತರ ಯಲ್ಲಪ್ಪ ಮತ್ತು ಪಾಮಣ್ಣ ಅವರನ್ನು ಪೊಲೀಸರು ಕಳಿಸಿದ್ದಾರೆ.