ಬೆಂಗಳೂರು: ಕೊಬ್ಬರಿ ಖರೀದಿಗೆ ರೈತರ ನೋಂದಣಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಒಂದು ವಾರ ತಾತ್ಕಾಲಿಕವಾಗಿ ಕೊಬ್ಬರಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕೊಬ್ಬರಿ ಬೆಂಬಲ ಬೆಲೆ ಕುರಿತ ಚರ್ಚೆಗೆ ಉತ್ತರ ನೀಡಿದ ಸಚಿವರು, ನೋಂದಣಿ ಅಕ್ರಮದಲ್ಲಿ ಭಾಗಿಯಾದ ಆರೋಪದ ಆಮೇಲೆ 9 ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ನೋಂದಣಿ ಪ್ರಕ್ರಿಯೆಗೆ ನೇಮಕಗೊಂಡ ಕೆಲವರು ಸ್ವಂತ ಲ್ಯಾಪ್ಟಾಪ್ ಖರೀದಿಸಿ ಮನೆಮನೆಗೆ ಹೋಗಿ ನೋಂದಣಿ ಮಾಡಿರುವುದು ಕಂಡು ಬಂದಿದೆ. ಈ ರೀತಿ ಲೋಪ ಪತ್ತೆ ಮಾಡಿ ಅಂತಹ ನೋಂದಣಿ ರದ್ದುಪಡಿಸಲಾಗುವುದು. ಈ ಮೊದಲು ಕೇಂದ್ರ ಸರ್ಕಾರ 7 ತಿಂಗಳವರೆಗೆ ಕೊಬ್ಬರಿ ಖರೀದಿಗೆ ಅವಕಾಶ ನೀಡಿದ್ದು, ಪ್ರಸ್ತುತ ಮೂರು ತಿಂಗಳಿನಂತೆ ಎರಡು ಅವಧಿಗೆ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.