ಬೆಳಗಾವಿ : ವರ್ಷದಲ್ಲಿ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಕಿತ್ತೂರು ರಾಣಿ ಚನ್ನಮ್ಮಳ ಹೋರಾಟ, ಬಾಬಾಸಾಹೇಬ್ ಅಂಬೇಡ್ಕರವರು ಬರೆದ ಸಂವಿಧಾನ, ಬಸವಣ್ಣವರ ಸಮಾನತೆ, ಬುದ್ಧನ ತತ್ವ, ಶಾಹು ಮಹಾರಾಜರ ಶಿಕ್ಷಣ ಕ್ರಾಂತಿ ಇವುಗಳನ್ನು ತಿಳಿದುಕೊಂಡರೆ ದೇಶದ ಅಭಿವೃದ್ದಿ ಜೊತೆಗೆ ನಮ್ಮ ವೈಯಕ್ತಿಕ ಬದುಕನ್ನು ಸಹ ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಚನ್ನಮ್ಮನ ಹುಟ್ಟೂರು ಕಾಕತಿಯಲ್ಲಿ (ಅ.23) ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಕಿತ್ತೂರಾಣಿ ಚನ್ನಮ್ಮ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವೀರಜ್ಯೋತಿಯು ರಾಜ್ಯದಾದ್ಯಂತ ಸಂಚರಿಸುವ ಮೂಲಕ ಕಿತ್ತೂರಿನ ಐತಿಹಾಸಿಕ ಘಟನೆ, ಪರಂಪರೆ, ಸ್ವಾತಂತ್ರ್ಯ ಹೋರಾಟ, ತತ್ವಾದರ್ಶ, ಇತಿಹಾಸ ಚರಿತ್ರೆ ಇವುಗಳನ್ನು ಎಲ್ಲೆಡೆ ಸಾರಿದಂತಾಗಿದೆ. ಸಮಾಜಕ್ಕೆ ಉತ್ಸವಗಳ ಅವಶ್ಯಕತೆವಿದ್ದು, ದಸರಾ ಉತ್ಸವ, ಕಿತ್ತೂರು ಉತ್ಸವ,ರನ್ನ ಉತ್ಸವ ಸೇರಿದಂತೆ ವಿವಿಧ ಉತ್ಸವಗಳ ಆಚರಣೆ ಜೊತೆಗೆ ಅವುಗಳ ಇತಿಹಾಸ ತಿಳಿದುಕೊಂಡು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ಸವಗಳು ಅರ್ಥಪೂರ್ಣವಾಗುವುದು ಎಂದು ಹೇಳಿದರು.
ಕಾಕತಿ ಅಭಿವೃದ್ಧಿಗೆ ಕ್ರಮ-ಭರವಸೆ:
ಕಿತ್ತೂರು ಪ್ರಾಧಿಕಾರದಿಂದ ಬಂದ ಅನುದಾನದಿಂದ ಕಾಕತಿಯಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಾಕತಿ ಕೋಟೆ ಅರಣ್ಯ ಇಲಾಖೆ ಅಧೀನದಲ್ಲಿದ್ದು, ವೀರರಾಣಿ ಚನ್ನಮ್ಮನ ಜನ್ಮಸ್ಥಳ ಖಾಸಗಿ ಒಡೆತನದಲ್ಲಿದ್ದು ಈ ಎರಡು ಸಮಸ್ಯೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಆದರೆ ಇದೀಗ ಜಿಲ್ಲಾಡಳಿತದಿಂದ ಭೂ ಸ್ವಾಧೀನ ಮಾಡಿ ವಶಕ್ಕೆ ಪಡೆದು ಆದಷ್ಟು ಬೇಗ ಅಭಿವೃದ್ಧಿಗೊಳಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದರು.
ಸರ್ಕಾರ ಕೊಟ್ಟ ಕಡಿಮೆ ಅನುದಾನದಲ್ಲಿ ಜಿಲ್ಲಾಡಳಿತ ಅಚ್ಚುಕಟ್ಟಾಗಿ ಉತ್ಸವ ನಡೆಸುತ್ತದೆ. ಆದರೆ ಇದಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಟ್ಟು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲು ಪ್ರಯತ್ನ ಮಾಡುತ್ತವೆ ಎಂದು ಲೋಕಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.