35 ವರ್ಷಗಳ ಹಿಂದೆ ನಡೆದಿದ್ದ ಕಳವು ಪ್ರಕರಣ ಒಂದರ ವಿಚಾರಣೆ ಸುದೀರ್ಘವಾಗಿ ನಡೆದಿದ್ದು, ಇದೀಗ ಆರೋಪಿ ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದೆ.
ಸ್ವಾರಸ್ಯಕರ ಸಂಗತಿ ಎಂದರೆ ಈ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವುದು, ಉತ್ತರ ಪ್ರದೇಶದ ಸಚಿವ. ಯೋಗಿ ಆದಿತ್ಯನಾಥ್ ಸರಕಾರದಲ್ಲಿ ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಸಚಿವರಾಗಿರುವ ರಾಕೇಶ್ ಸಚನ್ ತಪ್ಪಿತಸ್ಥರೆಂದು ಘೋಷಿತರಾಗಿದ್ದಾರೆ.
35 ವರ್ಷಗಳ ಹಿಂದೆ ರೈಲ್ವೆ ಇಲಾಖೆಯ ಗುತ್ತಿಗೆದಾರರಾಗಿದ್ದ ರಾಕೇಶ್, ಆ ಸಂದರ್ಭದಲ್ಲಿ ಹಳಿಗಳ ನಡುವೆ ಭಾರ ಸಮತೋಲಗೊಳಿಸುವ ಸಾಧನವನ್ನು ಕದ್ದ ಆರೋಪಕ್ಕೆ ಗುರಿಯಾಗಿದ್ದರು.
ಕಾನ್ಪುರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಸುದೀರ್ಘವಾಗಿ ನಡೆದಿದ್ದು, ಇದೀಗ ರಾಕೇಶ್ ಸಚನ್ ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿದೆ. ಅಲ್ಲದೆ ಶಿಕ್ಷೆ ಪ್ರಮಾಣದ ತೀರ್ಪನ್ನು ಕಾಯ್ದಿರಿಸಿದೆ.
ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ಸಚಿವ ರಾಕೇಶ್ ಸಚನ್ ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದಾರೆ. ತಮ್ಮ ಸರ್ಕಾರದ ಸಚಿವರೊಬ್ಬರು ತಪ್ಪಿತಸ್ಥನಾಗಿರುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈಗ ಮುಜುಗರಕ್ಕೀಡು ಮಾಡಿದೆ.