ಬೆಂಗಳೂರು: ಸಿದ್ಧಾರ್ಥ್ ವಿಹಾರ ಟ್ರಸ್ಟಿಗೆ ನೀಡಿದ ಭೂಮಿಯನ್ನು ವಾಪಸ್ ನೀಡಲು ತೀರ್ಮಾನಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕೆಐಎಡಿಬಿ ಹಂಚಿಕೆ ಮಾಡಿದ್ದ ಭೂಮಿಯನ್ನು ವಾಪಸ್ ನೀಡಲು ನಿರ್ಧರಿಸಲಾಗಿದೆ. ಕಾನೂನು ಬಾಹಿರವಾಗಿ ಸೈಟ್ ಹಂಚಿಕೆಯಾಗಿದೆ ಎಂದು ಆರೋಪವಿತ್ತು. ಈ ವಿಚಾರದಲ್ಲಿ ರಾಹುಲ್ ಖರ್ಗೆಗ ಮಾಹಿತಿ ಇಲ್ಲ ಅನಿಸುತ್ತೆ. ನಮ್ಮ ಕುಟುಂಬದಲ್ಲಿ ಮೂವರು ಅಷ್ಟೇ ರಾಜಕೀಯದಲ್ಲಿ ಇದ್ದೇವೆ. ಇದರಿಂದ ಕುಟುಂಬದ ಸದಸ್ಯರಿಗೆ ಹಿಂಸೆಯಾಗುತ್ತಿದೆ ಎಂದು ನೊಂದಿದ್ದಾರೆ. ಹೀಗಾಗಿ ಸೆಪ್ಟೆಂಬರ್ 20ರಂದು ರಾಹುಲ್ ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ಕಾನೂನಾತ್ಮಕವಾಗಿ ಸೈಟು ವಾಪಸ್ ಕೊಡುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸಂಪೂರ್ಣ ದಾಖಲೆಯ ಆಧಾರದ ಮೇಲೆ ಕೆಐಎಡಿಬಿ ನಿವೇಶನ ಸಿಕ್ಕಿತ್ತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಎರಡು ಮೂರು ಕಾರಣ ನೀಡಿ ನಿವೇಶನವನ್ನು ವಾಪಸ್ ನೀಡಿದ್ದಾರೆ. ಇದು ಖಾಸಗಿ ಟ್ರಸ್ಟ್ ಅಲ್ಲ, ಪಬ್ಲಿಕ್ ಟ್ರಸ್ಟ್ ಎಂದು ನಮೂದಿಸಿದ್ದಾರೆ. ಸಿಎ ಸೈಟ್ ನಲ್ಲಿ ಯಾವುದೇ ರೀತಿ ರಿಯಾಯಿತಿ ಕೊಡಲು ಬರುವುದಿಲ್ಲ. ತರಬೇತಿಗೆ ಎಂದು ಪಡೆದಿದ್ದು, ಲಾಭದ ಉದ್ದೇಶ ಇರಲಿಲ್ಲ. ಆದರೆ ಬಿಜೆಪಿಯವರು ಹಲವು ರೀತಿಯ ಆರೋಪ ಮಾಡಿದರು. ವೈಯಕ್ತಿಕವಾಗಿ ರಾಜಕೀಯ ಆರೋಪದಿಂದ ಬೇಸರವಾಗಿದೆ. ಹೀಗಾಗಿ ಸೈಟ್ ಬೇಡ ಎಂದು ರಾಹುಲ್ ಖರ್ಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.
ರಾಜಕೀಯ ಆರೋಪದಿಂದ ನೊಂದು ಸಿಎ ಸೈಟ್ ಗಳನ್ನು ವಾಪಸ್ ನೀಡಲಾಗಿದೆ. ಇದರಲ್ಲಿ ಅಕ್ರಮ ಇದ್ದಿದ್ದರೆ ಮೋದಿ, ಅಮಿತ್ ಶಾ ಬಿಡುತ್ತಿದ್ದರಾ? ವಿಜಯೇಂದ್ರ ಕಲಬುರ್ಗಿಯವರೆಗೆ ಪಾದಯಾತ್ರೆ ಮಾಡುತ್ತಿದ್ದರು. ಇಲ್ಲಿ ಸಮಸ್ಯೆ ಅಂದ್ರೆ ಸಿಎ ಸೈಟ್ ಪಡೆಯಬಾರದು ಅನ್ನುವುದಾಗಿದೆ ಅಷ್ಟೇ. ಖರ್ಗೆ ಕುಟುಂಬ ಸೈಟ್ ತೆಗೆದುಕೊಳ್ಳಬಾರದು ಅನ್ನೋದು ಅಷ್ಟೇ. ಛಲವಾದಿ ನಾರಾಯಣ ಸ್ವಾಮಿ ಸಿಎ ಸೈಟ್ ಪಡೆದುಕೊಂಡಿದ್ದರಲ್ಲವೇ? ಬಿರಿಯಾನಿ ಶಾಪ್ ಮಾಡೋದಕ್ಕೆ ಸಿಎ ಸೈಟ್ ಪಡೆದಿದ್ದರಲ್ಲವಾ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.