ಯಾವುದೇ ವಾಹನಗಳು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಅದರ ಸುರಕ್ಷತೆ ಪರೀಕ್ಷಿಸುವುದು ಬಹು ಮುಖ್ಯವಾಗುತ್ತದೆ. ಈವರೆಗೆ ವಾಹನ ತಯಾರಕ ಕಂಪನಿಗಳು ವಿದೇಶಗಳಲ್ಲಿ ಈ ಕ್ರಾಶ್ ಟೆಸ್ಟ್ ಮಾಡಿಸಬೇಕಿದ್ದು, ಇದೀಗ ದೇಶದ ಮೊದಲ ‘ಕ್ರಾಶ್ ಟೆಸ್ಟ್’ ಯೋಜನೆ ‘ಭಾರತ್ ಎನ್.ಸಿ.ಎ.ಪಿ.’ ಗೆ ಮಂಗಳವಾರದಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ.
ಈ ಕ್ರಾಶ್ ಟೆಸ್ಟ್ ಬಳಿಕ ವಾಹನಗಳಿಗೆ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಸ್ಟಾರ್ ರೇಟಿಂಗ್ ನೀಡಲಿದ್ದು, ಇದರಿಂದಾಗಿ ವಾಹನ ಖರೀದಿದಾರರು ಉತ್ಪನ್ನದ ಗುಣಮಟ್ಟದ ಆಧಾರದ ಮೇಲೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಬಹುದಾಗಿದೆ. ಭಾರತದಲ್ಲಿಯೇ ಈಗ ‘ಕ್ರಾಶ್ ಟೆಸ್ಟ್’ ಯೋಜನೆ ‘ಭಾರತ್ ಎನ್.ಸಿ.ಎ.ಪಿ’ಆರಂಭವಾಗಿರುವುದನ್ನು ಆಟೊಮೊಬೈಲ್ ಉದ್ಯಮ ಕ್ಷೇತ್ರ ಸ್ವಾಗತಿಸಿದೆ.
ಈವರೆಗೆ ಕಂಪನಿಗಳು ತಾವು ತಯಾರಿಸಿದ ವಾಹನಗಳ ಸುರಕ್ಷತಾ ಸಾಮರ್ಥ್ಯವನ್ನು ಪರೀಕ್ಷಿಸಲು ವಿದೇಶದಲ್ಲಿ ಕ್ರಾಶ್ ಟೆಸ್ಟ್ ಮಾಡಿಸಬೇಕಿದ್ದು ಇದಕ್ಕೆ 2.5 ಕೋಟಿ ರೂಪಾಯಿಗಳು ವೆಚ್ಚವಾಗುತ್ತಿತ್ತು. ಇದೀಗ ಭಾರತದಲ್ಲಿಯೇ ಈ ಪರೀಕ್ಷೆ ನಡೆಸುವ ಯೋಜನೆ ಆರಂಭವಾಗಿರುವುದರಿಂದ ಕೇವಲ 60 ಲಕ್ಷ ರೂಪಾಯಿಗಳಲ್ಲಿ ಕ್ರ್ಯಾಶ್ ಟೆಸ್ಟ್ ಪೂರ್ಣಗೊಳ್ಳಲಿದೆ. ಇದರಿಂದ ಆಟೋಮೊಬೈಲ್ ಕಂಪನಿಗಳಿಗೆ ಹಣ ಉಳಿತಾಯವಾಗುವುದರ ಜೊತೆಗೆ ಗ್ರಾಹಕರಿಗೂ ಸಹ ಸುರಕ್ಷತಾ ಖಾತ್ರಿ ದೊರೆಯಲಿದೆ.