ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 94.73 ಕೋಟಿ ರೂಪಾಯಿ ಹಗರಣವನ್ನು ರಾಜ್ಯ ಸರ್ಕಾರ, ಎಸ್ಐಟಿ ತನಿಖೆಗೆ ವಹಿಸಿದ್ದು, ಈಗಾಗಲೇ ಅಮಾನತುಗೊಂಡಿರುವ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ್ ಜಿ. ದುಗ್ಗಣ್ಣನವರನ್ನು ಬಂಧಿಸಲಾಗಿದೆ.
ಎಸ್ಐಟಿ ವಿಚಾರಣೆ ವೇಳೆ ಪದ್ಮನಾಭ, ಸಚಿವ ನಾಗೇಂದ್ರ ಅವರ ಸೂಚನೆ ಮೇರೆಗೆ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ರಾತ್ರಿ ತಮ್ಮ ಸರ್ಕಾರದ ಹಿರಿಯ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ನಾಗೇಂದ್ರ ಅವರ ಹೆಸರು ಎಸ್ಐಟಿ ಮುಂದೆ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಅವರಿಂದ ರಾಜೀನಾಮೆ ಪಡೆಯಲು ಸಿದ್ದರಾಮಯ್ಯನವರು ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ಸಚಿವರಿಂದ ಅವರುಗಳ ಅಭಿಪ್ರಾಯ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬಹುತೇಕ ನಾಗೇಂದ್ರ ಅವರ ರಾಜೀನಾಮೆ ಖಚಿತ ಎನ್ನಲಾಗಿದ್ದು, ಮುಜುಗರದಿಂದ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡುವಂತೆ ನಾಗೇಂದ್ರ ಅವರಿಗೆ ಮುಖ್ಯಮಂತ್ರಿಗಳು ಸೂಚಿಸುವ ಸಾಧ್ಯತೆ ಇದೆ.