
ಬೆಂಗಳೂರು: ಮೀಸಲು ಅರಣ್ಯ ಪ್ರದೇಶದ ಜಮೀನು ಒತ್ತುವರಿಯಲ್ಲಿ ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರ ವಿರುದ್ಧ ರಾಜ್ಯಪಾಲರಿಗೆ ಸೋಮವಾರ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ದೂರು ಸಲ್ಲಿಸಿದ್ದು, ಹಲವು ಗಂಭೀರ ಆರೋಪ ಉಲ್ಲೇಖಿಸಿದ್ದಾರೆ. ರಾಯಚೂರು ಜಿಲ್ಲೆ ಮೀಸಲು ಅರಣ್ಯ ಪ್ರದೇಶದಲ್ಲಿ 16 ಎಕರೆ 21 ಗುಂಟೆ ಒತ್ತುವರಿಯಾಗಿದ್ದು, ಈ ಪೈಕಿ ಸಚಿವ ಬೋಸರಾಜು ಪತ್ನಿ ಕೃಷ್ಣವೇಣಿ ಅವರು 5 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ 2022 ರಲ್ಲಿ ದಾಖಲಿಸಿದ್ದ ಕೇಸ್ ನಲ್ಲಿ ಕೃಷ್ಣವೇಣಿ ಎರಡನೇ ಆರೋಪಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕೃಷ್ಣವೇಣಿ ಮತ್ತು ಇತರರು ಅರಣ್ಯ ಒತ್ತುವರಿ ಅಕ್ರಮದಲ್ಲಿ ಸಚಿವ ಬೋಸರಾಜು ಮೇಲೆ ರಾಜಕೀಯ ಪ್ರಭಾವ ಬೀರಿದ್ದಾರೆ. ಆರೋಪಿಗಳ ಜೊತೆ ಶಾಮೀಲಾಗಿ ಸ್ವಜನ ಪಕ್ಷಪಾತ ಎಸಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸಚಿವ ಸಂಪುಟದಿಂದ ಕೈಬಿಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ದೂರು ನೀಡಲಾಗಿದೆ.
ಈ ದೂರು ನನ್ನ ತೇಜೋವಧೆ ಮಾಡುವ ಹುನ್ನಾರವಾಗಿದೆ. ಇಂತಹ ರಾಜಕೀಯ ಕುತಂತ್ರಕ್ಕೆ ಜಗ್ಗುವುದಿಲ್ಲ. ನಾನು ಮತ್ತು ನನ್ನ ಕುಟುಂಬ ಸದಸ್ಯರು ಮೀಸಲು ಅರಣ್ಯ ಒತ್ತುವರಿ ಮಾಡಿಕೊಂಡಿಲ್ಲ ಎಂದು ಬೋಸರಾಜು ಹೇಳಿದ್ದಾರೆ.