ಕಳೆದ 15 ದಿನಗಳ ಹಿಂದೆ ಅತೀ ಹೆಚ್ಚು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆಯನ್ನ ವರದಿ ಮಾಡುತ್ತಿದ್ದ ಕಲಬುರಗಿಯಲ್ಲಿ ಇದೀಗ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಸಚಿವ ಮುರುಗೇಶ್ ನಿರಾಣಿ ಜಿಲ್ಲೆಯಲ್ಲಿ ಕೈಗೊಳ್ಳಲಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ರು.
ಕಲಬುರಗಿ ಜಿಲ್ಲೆಯಲ್ಲಿ ಕಳೆದ 15 ದಿನಗಳ ಹಿಂದೆ ಅತೀ ಹೆಚ್ಚು ಸೋಂಕಿತರಿದ್ದರು.
ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಜಿಲ್ಲೆಗೆ ಬಂದ ಜನರಿಂದಾಗಿ ಕೊರೊನಾ ಸೋಂಕಿನ ವರದಿಯಲ್ಲಿ ನಾವು ಮೂರನೇ ಸ್ಥಾನಕ್ಕೆ ಏರಿದ್ದೆವು. ಆದರೆ ಈಗ ನಾವು 19ನೇ ಸ್ಥಾನಕ್ಕೆ ಇಳಿದಿದ್ಧೇವೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ಮಾತ್ರವಲ್ಲದೇ ಪಕ್ಕದ ಜಿಲ್ಲೆಗಳಿಗೂ ಆಕ್ಸಿಜನ್ ಕಳಿಸಿಕೊಡ್ತಿದ್ದೇವೆ.
ಕಾಳಸಂತೆಯಲ್ಲಿ ರೆಮಿಡಿಸಿವರ್ ಮಾರಾಟಕ್ಕೆ ಬ್ರೇಕ್ ಹಾಕಿದ್ದೇವೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೆಮಿಡಿಸಿವರ್ ಸ್ಟಾಕ್ ಇದೆ. ಗಣಿ ಇಲಾಖೆಯಿಂದ ನೂರು ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ ಆಕ್ಸಿಜನ್ ಟ್ಯಾಂಕರ್ಗಳ ಪೂರೈಕೆಯಾಗಿದೆ. ಅಲ್ಲದೇ ಕಲಬುರಗಿ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಘಟಕವನ್ನೂ ನಿರ್ಮಿಸುತ್ತಿದ್ದೇವೆ ಎಂದು ಹೇಳಿದ್ರು.
ಇನ್ನು ಇದೇ ವೇಳೆ ಜಿಲ್ಲೆಯಲ್ಲಿ ಬ್ಲಾಕ್ಫಂಗಸ್ ಸೋಂಕಿನ ವಿಚಾರವಾಗಿಯೂ ಮಾತನಾಡಿದ ಅವರು, ಬ್ಲಾಕ್ ಫಂಗಸ್ ಬೇಕಾದ 100 ವೈಲ್ ಇಂಜೆಕ್ಷನ್ ಉಮೇಶ್ ಜಾಧವ್ ತರಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಮೂರು ಬ್ಲಾಕ್ ಫಂಗಸ್ ಕೇಸ್ ಇದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಅಂಕಿ ಅಂಶ ಮುಚ್ಚಿಡುವ ಕೆಲಸ ಆಗಿದ್ದರೆ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ತೇನೆ ಎಂದು ಹೇಳಿದ್ರು.