![](https://kannadadunia.com/wp-content/uploads/2023/06/madhu-bangarappa-dh-1013852-1627474418.jpg)
ಶಿವಮೊಗ್ಗ : ಮಂಗನ ಕಾಯಿಲೆ ಬಾಧಿತ ಪ್ರದೇಶದ ಜನರು ಜ್ವರದಂತಹ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡದೇ, ಶೀಘ್ರವಾಗಿ ಚಿಕಿತ್ಸೆ ಪಡೆಯಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಂಗನ ಕಾಯಿಲೆ (ಕೆಎಫ್‍ಡಿ) ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗನ ಕಾಯಿಲೆ ಬಗ್ಗೆ ಗಾಬರಿಯಾಗುವುದು ಬೇಡ. ಆದರೆ ಜ್ವರ, ತಲೆನೋವು, ಸ್ನಾಯುಗಳ ನೋವು ಇತ್ಯಾದಿ ಲಕ್ಷಣ ಕಾಣಿಸಿಕೊಂಡಾಗ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಆರಂಭದಲ್ಲೇ ರೋಗ ಲಕ್ಷಣಗಳಿಗೆ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದರು.
ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಮಂಗನ ಕಾಯಿಲೆ ವೈರಾಣು ಸೋಂಕಿನ ನಿಂಫ್ ಹಂತದಲ್ಲಿರುವ ಉಣ್ಣಿಗಳು ಕಚ್ಚುವುದರಿಂದ ಹರಡುತ್ತದೆ. ಮಂಗನ ಅಸ್ವಾಭಾವಿಕ ಸಾವು ಮಂಗನ ಕಾಯಿಲೆಯ ಕುರಿತಾದ ಎಚ್ಚರಿಕೆ ಗಂಟೆ. ನಂತರ ಮನುಷ್ಯರಿಗೆ ಬರುತ್ತದೆ. ಜ್ವರ, ತಲೆನೋವು ಇತರೆ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಬರಬೇಕು. ಇದು ಮೊದಲನೇ ಹಂತ. ಈ ಹಂತದಲ್ಲಿ ಸೋಂಕನ್ನು ಗುಣಪಡಿಸಬಹುದು. ಎರಡನೇ ಹಂತದಲ್ಲಿ ಫಿಟ್ಸ್, ನರಸಂಬಂಧಿ ಸಮಸ್ಯೆ, ರಕ್ತಸ್ರಾವ ಉಂಟಾಗುತ್ತದೆ.
ಅರಣ್ಯ ಭಾಗದಲ್ಲಿ ಇರುವವರೆಲ್ಲ ಸರ್ಕಾರಿ ಆಸ್ಪತ್ರೆಗಳಿಂದ ನೀಡಲಾಗುವ ಡಿಇಪಿಎ ತೈಲವನ್ನು ಹಚ್ಚಿಕೊಳ್ಳಬೇಕು. 2022 ರವರೆಗೆ ಕೆಎಫ್‍ಡಿ ನಿಯಂತ್ರಣ ಲಸಿಕೆ ಇತ್ತು. ಇದೀಗ ಹೊಸ ಲಸಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ.
ರಾಜ್ಯದಲ್ಲಿ 70 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆ 25 ಪಾಸಿಟಿವ್ ಪ್ರಕರಣಗಳಿವೆ. 1 ಸಾವು ಸಂಭವಿಸಿದೆ. ಕೆಎಫ್‍ಡಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಇತರೆ ಇಲಾಖೆಗಳ ಸಮನ್ವಯದೊಂದಿಗೆ ಕೈಗೊಳ್ಳಲಾಗುತ್ತಿದೆ. ಹಾಗೂ ಎಬಿಎಆರ್‍ಕೆ ಅಡಿಯಲ್ಲಿ ಎಂಪಾನೆಲ್ ಆದ ಖಾಸಗಿ ಆಸ್ಪತ್ರೆಯಲ್ಲಿ ಕೆಎಫ್‍ಡಿ ಬಾಧಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.