ಬೆಂಗಳೂರು: ದಲಿತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿಗೊಳಿಸುವುದಾಗಿ ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಜನಾಶೀರ್ವಾದ ಯಾತ್ರೆ ಅಂಗವಾಗಿ ಸೋಮವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 84 ಲೋಕಸಭೆ ಕ್ಷೇತ್ರಗಳಲ್ಲಿ ಅಂಬೇಡ್ಕರ್ ವಸತಿ ಕಾಲೇಜು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಪ್ರತಿ ರಾಜ್ಯದಲ್ಲಿ 100 ಜನರಿಗೆ ಐಎಎಸ್ ಮಾಡಿಸುವ ಸಂಕಲ್ಪವನ್ನು ಬಿಜೆಪಿ ಮಾಡಿದ್ದು, ದಲಿತರಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕೆನ್ನುವ ನಿಟ್ಟಿನಲ್ಲಿ ವಸತಿ ಕಾಲೇಜುಗಳನ್ನು ಆರಂಭಿಸಲಾಗುತ್ತದೆ. ದಲಿತರಿಗೆ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.