ಚಿತ್ರದುರ್ಗ: ಪತ್ರಿಕಾ ವಿತರಕರ ನೆರವಿಗಾಗಿ 10 ಕೋಟಿ ರೂಪಾಯಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಸಚಿವ ಡಿ. ಸುಧಾಕರ್ ತಿಳಿಸಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ವಿತರಕರ 4ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಮೂಲಕ ಇ- ಶ್ರಮ ಅಡಿಯಲ್ಲಿ ವಿತರಕರ ನೋಂದಣಿ ಮಾಡಿಸಲಾಗುತ್ತಿದ್ದು, ಅವಘಡ ಉಂಟಾದ ಸಂದರ್ಭದಲ್ಲಿ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ.
ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಪತ್ರಿಕಾ ವಿತರಕರಿಗೆ 10 ಕೋಟಿ ರೂ. ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವಂತೆ ಸಿಎಂಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಸಂಕೇಶ್ವರ ಮಾತನಾಡಿ, ಭಾರತದಲ್ಲಿ ಕಡಿಮೆ ಪ್ರಮಾಣದಲ್ಲಿ ಕಾಗದ ಉತ್ಪಾದನೆ ಆಗುತ್ತಿದ್ದು, ಶೇಕಡ 70ರಷ್ಟು ಕಾಗದ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಆಮದು ಮೇಲೆ ಶೇಕಡ 5ರಷ್ಟು ತೆರಿಗೆ ವಿಧಿಸುತ್ತಿದೆ. ಭಾರತದಲ್ಲಿ ತೆರಿಗೆ ನೀತಿಗಳು ಸರಿಯಾಗಿಲ್ಲ. ಪಿಕ್ ಪಾಕೆಟ್ ಮಾದರಿಯಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.