ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟ ಈ ಬಾರಿ ಕೂಡ ಸಚಿವ ಡಿ. ಸುಧಾಕರ್ ಅವರ ಪಾಲಾಗಿದೆ.
ಮಂಗಳವಾರ ರಥೋತ್ಸವದ ಸಂದರ್ಭದಲ್ಲಿ ಬರೋಬ್ಬರಿ 61 ಲಕ್ಷ ರೂ.ಗೆ ಹರಾಜಿನಲ್ಲಿ ಕೂಗಿ ಮುಕ್ತಿ ಬಾವುಟವನ್ನು ಸಚಿವರು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ವರ್ಷ 55 ಲಕ್ಷ ರೂಪಾಯಿಗೆ ಅವರು ಮುಕ್ತಿ ಬಾವುಟ ಪಡೆದಿದ್ದರು.
ಸರ್ಕಾರಿ ಸವಾಲು ಒಂದು ಕೋಟಿ ರೂಪಾಯಿಯಿಂದ ಆರಂಭವಾಯಿತು. ಹಿರೇಹಳ್ಳಿ ಮಲ್ಲೇಶ್ ಮೊದಲಿಗೆ 5 ಲಕ್ಷ ರೂ.ಗೆ ಮುಕ್ತಿ ಬಾವುಟದ ಹರಾಜು ಕೂಗಿದರು. ತಿಮ್ಮನಹಳ್ಳಿಯ ರಾಜಣ್ಣ, ದಾವಣಗೆರೆಯ ವಜ್ರ ಮಹೇಶ್, ನಾಗೇಶ್ ಹರಾಜಿನ ಮೊತ್ತ ಏರಿಸಿದರು. ಕೊನೆಗೆ ಸಚಿವ ಸುಧಾಕರ್ 61 ಲಕ್ಷ ರೂ.ಗೆ ಹರಾಜು ಕೂಗಿದರು.
ಮುಕ್ತಿ ಬಾವುಟ ಪಡೆದುಕೊಂಡರೆ ಒಳಿತಾಗುತ್ತದೆ, ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದ್ದು, ಶ್ರೀಮಂತರು, ರಾಜಕಾರಣಿಗಳು, ಉದ್ಯಮಿಗಳು ಮುಕ್ತಿ ಬಾವುಟ ಖರೀದಿಸಲು ಪೈಪೋಟಿಗೆ ಬಿದ್ದು ಖರೀದಿಸುತ್ತಾರೆ.