ಧಾರವಾಡ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಮೈನಿಂಗ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು, ಕೆಲಸ ಆರಂಭಿಸಿದ್ದಾರೆ. ಇದನ್ನು ತಡೆಯಲು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್.ಆರ್. ಹಿರೇಮಠ ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಪಕ್ಕದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಜನಾರ್ಧನ ರೆಡ್ಡಿಗೆ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದರ ತಡೆಗೆ ಕ್ರಮಕೈಗೊಳ್ಳಬೇಕು, ಗಣಿ ಗುತ್ತಿಗೆ ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿದ್ದು, ಮೈನಿಂಗ್ ಆರಂಭಿಸಿದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ಜನಾರ್ಧನ ರೆಡ್ಡಿ ಬಳಿ ಇರುವ ಗಣಿಗಳ ಗುತ್ತಿಗೆಯನ್ನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಟಿಬಿ ಸ್ಯಾನಿಟೇರಿಯಂ ಸಮೀಪ ಸರ್ವೇ ನಂಬರ್ 601 ರಲ್ಲಿ 57 ಎಕರೆ ಜಮೀನು ಕಬಳಿಸಿದ ಸಾರಿಗೆ ಸಚಿವ ಶ್ರೀರಾಮುಲು ಮತ್ತು ಅವರ ಸಹಚರರಿಗೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ನೋಟಿಸ್ ನೀಡಿರುವುದು ಸ್ವಾಗತ ಬೆಳವಣಿಗೆಯಾಗಿದೆ ಎಂದು ತಿಳಿಸಿದ ಹಿರೇಮಠ, ಅಕ್ರಮಕ್ಕೆ ಸಾಥ್ ನೀಡಿದ ಅಂದಿನ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.