alex Certify ಮನೆ, ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಇನ್ನು ಕಡಿಮೆ ದರದಲ್ಲಿ ಸುಲಭವಾಗಿ ಮರಳು ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ, ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಇನ್ನು ಕಡಿಮೆ ದರದಲ್ಲಿ ಸುಲಭವಾಗಿ ಮರಳು ಲಭ್ಯ

ಶಿವಮೊಗ್ಗ: ಮರಳು ನೀತಿಯನ್ವಯ ಜಿಲ್ಲೆಯಲ್ಲಿ ಅವಧಿ ಮುಗಿದಿರುವ ಮರಳು ನಿಕ್ಷೇಪಗಳಿಗೆ ನವೀಕರಣಗೊಳಿಸಿ ಆದಷ್ಟು ಶೀಘ್ರದಲ್ಲಿ ಮರಳು ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಟಾಸ್ಕ್ ಫೋರ್ಸ್, ಜಿಲ್ಲಾ ಮರಳು ಸಮಿತಿ ಮತ್ತು ಜಿಲ್ಲಾ ಕ್ರಷರ್ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿಕೃತವಾಗಿ ಸಾರ್ವಜನಿಕರಿಗೆ ಮರಳು ಲಭ್ಯವಾಗುವಂತೆ ಕ್ರಮ ವಹಿಸಬೇಕು. ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಗಟ್ಟಲು ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‍ ಗಳನ್ನು ಸ್ಥಾಪಿಸಿ ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕ್ರಮ ಗಣಿಗಾರಿಕೆ ತಡೆಯಲು ಗಸ್ತು, ಪೊಲೀಸರನ್ನು ಬಳಕೆ ಮಾಡಿಕೊಳ್ಳುವಂತೆ, ಒಂದು ಉಸ್ತುವಾರಿ ತಂಡ ರಚಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಅವರಿಗೆ ತಿಳಿಸಿದರು.

ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಮರಳು ಪೂರೈಕೆ ಸಂಬಂಧ ಬ್ಲಾಕ್ ಗಳನ್ನು ನಿಗದಿಪಡಿಸಬೇಕು. ಕಡಿಮೆ ಕಾಮಗಾರಿ ಇರುವೆಡೆ ಒಂದು ಬ್ಲಾಕ್ ಹಾಗೂ ಕಾಮಗಾರಿಗಳನ್ನು ನೋಡಿಕೊಂಡು ಅದಕ್ಕನುಗುಣವಾಗಿ ಹಾಗೂ ಕಾಮಗಾರಿಗಳ ವಿವರ ಮತ್ತು ಬೇಡಿಕೆಗಳನ್ನು ಪರಿಶೀಲಿಸಿ ಬ್ಲಾಕ್ ಗಳನ್ನು ಮೀಸಲಿಡುವಂತೆ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಸ ಮರಳು ನೀತಿ -2020 ರಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 1 ವರ್ಷ ಅವಧಿಗೆ ಮರಳು ಎತ್ತುವಗಳಿ ಮಾಡಲು ಈಗಾಗಲೇ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ ಮತ್ತು ಶಿಕಾರಿಪುರದ 70 ಬ್ಲಾಕ್ ಗಳಲ್ಲಿ ಅನುಮತಿ ನೀಡಲಾಗಿದೆ. ಐದು ವರ್ಷ ಪೂರ್ಣಗೊಳಿಸಿರುವ 35 ಬ್ಲಾಕ್ ಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅನುಮತಿ ನೀಡಲು ಮಾರ್ಗಸೂಚಿಗಳನ್ನು ಸಿದ್ದಪಡಿಸುವಂತೆ ತಿಳಿಸಿದರು.

ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994, ತಿದ್ದುಪಡಿ ನಿಯಮಗಳು 2016ರನ್ವಯ ಇ-ಟೆಂಡರ್ ಕಂ ಹರಾಜು ಮೂಲಕ ವಿಲೇಪಡಿಸಲಾಗಿದ್ದ ಮರಳು ಬ್ಲಾಕ್ ಗಳಿಗೆ ಗುತ್ತಿಗೆ ಮಂಜೂರು ಮಾಡುವ ಮುನ್ನ ಎನ್‍ಓಸಿ, ಇತರೆ ದಾಖಲಾತಿಗಳನ್ನು ಪರಿಶೀಲಿಸಿ ಮಂಜೂರು ಮಾಡುವಂತೆ ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸೀನರ್ ಜಿಯಾಲಜಿಸ್ಟ್ ನವೀನ್ ಮಾತನಾಡಿ, 2023-24 ನೇ ಸಾಲಿಗೆ,  ಗಣಿಗಾರಿಕೆ ಇಲಾಖೆ ರಾಜಸ್ವ ಗುರಿ 35 ಕೋಟಿ ಇದ್ದು, 2024 ರ ಫೆಬ್ರವರಿ ಅಂತ್ಯದವರೆಗೆ 31 ಕೋಟಿ ರೂ. ರಾಜಸ್ವ ಸಂಗ್ರಹ ಆಗಿದ್ದು ಶೇ. 106.53 ಪ್ರಗತಿ ಸಾಧಿಸಲಾಗಿದೆ. ಅಕ್ರಮ ಉಪಖನಿಜ ಗಣಿಗಾರಿಕೆ/ಸಾಗಾಣಿಕೆ/ದಾಸ್ತಾನು ಕುರಿತು ಗಣಿ ಹಾಗೂ ಪೊಲೀಸ್ ಇಲಾಖೆಯಿಂದ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಫೆಬ್ರವರಿ ಅಂತ್ಯದವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಾಮಾನ್ಯ ಮರಳು, ಕಟ್ಟಡ ಕಲ್ಲು ಇತರೆ ಸೇರಿ ಒಟ್ಟು 44 ಪ್ರಕರಣ ಪತ್ತೆ ಹಚ್ಚಲಾಗಿದ್ದು, 8 ಪ್ರಕರಣದ ಮೊಕದ್ದಮೆ ದಾಖಲಿಸಿದ್ದು 34.82 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಅಕ್ರಮ ಸಾಗಾಣಿಕೆಯಲ್ಲಿ 166 ಪ್ರಕರಣ ಪತ್ತೆ ಹಚ್ಚಿ 55.16 ಲಕ್ಷ ರೂ.ದಂಡ ಮತ್ತು ಅಕ್ರಮ ದಾಸ್ತಾನು ಸಂಬಂಧ 6.35 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ ಅಕ್ರಮ ಸಾಗಾಣಿಕೆಗೆ ಸಂಬಂಧಿಸಿದಂತೆ ಸಾಮಾನ್ಯ ಮರಳು, ಕಟ್ಟಡ ಕಲ್ಲು ಇತರೆ ಸೇರಿ ಒಟ್ಟು 80 ಪ್ರಕರಣ ಪತ್ತೆ ಹಚ್ಚಿ 24.45 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳು, ಪಟ್ಟಾ ಜಮೀನಿನಲ್ಲಿ ಕಟ್ಟಡ ಕಲ್ಲು ಮಂಜೂರಾತಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅರ್ಜಿಗಳಿಗೆ ಅನುಮತಿ ನೀಡಿದರು. ಹಾಗೂ ಕರ್ನಾಟಕ ಕಲ್ಲು ಪುಡಿ ಮಾಡುವ ಘಟಕಗಳ ನಿಯಂತ್ರಣ ಅಧಿನಿಯಮ 2011, ತಿದ್ದುಪಡಿ ನಿಯಮಗಳು 2020 ರನ್ವಯ ಜಲ್ಲಿ ಕ್ರಷರ್ ಘಟಕಗಳ ಅವಧಿಯನ್ನು 20 ವರ್ಷಗಳಿಗೆ ವಿಸ್ತರಿಸಲು ಸಲ್ಲಿಸಲಾಗಿದ್ದ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹ ಅರ್ಜಿಗಳಿಗೆ ಷರತ್ತುಗಳನ್ನು ವಿಧಿಸಿ ಅನುಮೋದನೆ ನೀಡಿದರು.

ಸಭೆಯಲ್ಲಿ ಜಿ.ಪಂ.ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಸಾಗರ ಎಸಿ ದಿನೇಶ್, ಗಣಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...