ಬೆಂಗಳೂರು : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾರು ಚಾಲಕ ಕಿರಣ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸುಬ್ರಮಣ್ಯಪುರ ಪೊಲೀಸರು ಪ್ರತಿಮಾ ಕೊಲೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅದರಲ್ಲಿ ಕಿರಣ್ ಎಂಬಾತ ಪ್ರತಿಮಾ ಅವರ ಹಳೆ ಡ್ರೈವರ್ ಆಗಿದ್ದನು ಎಂಬುದು ತಿಳಿದುಬಂದಿದೆ. ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಇದೀಗ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತಿಮಾ ಕೊಲೆ ಕೇಸ್ನಲ್ಲಿ ಓರ್ವ ಆರೋಪಿ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಡಿಸಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗ್ತಿದೆ. ನಾಲ್ಕು ವರ್ಷದಿಂದ ಪ್ರತಿಮಾ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ. 10 ದಿನದ ಹಿಂದೆ ಕಿರಣ್ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆರೋಪಿ ಕಿರಣ್ ನನ್ನು ಮಹದೇಶ್ವರಬೆಟ್ಟದಲ್ಲಿ ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರೆಯುತ್ತಿದೆ ಎಂದರು.
ಕೆಲಸದಿಂದ ತೆಗೆದುಹಾಕಿದ್ದಕ್ಕೆ ಸೇಡು..?
ಪ್ರತಿಮಾ ಹತ್ಯೆ ಪ್ರಕರಣದಲ್ಲಿ ಮಾಜಿ ಕಾರು ಚಾಲಕ ಕಿರಣ್ ಪ್ರಮುಖ ಆರೋಪಿಯಾಗಿದ್ದು, ಈತ 4 ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಂತರ ಯಾವುದೋ ಕಾರಣಕ್ಕೆ, ಯಾವುದೋ ಕಿರಿಕ್ ನಡೆದ ಹಿನ್ನೆಲೆ 10 ದಿನದ ಹಿಂದೆ ಈತನನ್ನು ಪ್ರತಿಮಾ ಕೆಲಸದಿಂದ ತೆಗೆದು ಹಾಕಿದ್ದರು. ಆತ ಕೆಲಸದಿಂದ ತೆಗೆದು ಹಾಕಬೇಡಿ ಎಂದು ಪ್ರತಿಮಾ ಕಾಲಿಗೆ ಬಿದ್ದು ಬೇಡಿಕೊಂಡಿದ್ದನಂತೆ. ಆದರೂ ಕೆಲಸಕ್ಕೆ ಸೇರಿಸಿಕೊಳ್ಳದ ಹಿನ್ನೆಲೆ ಸೇಡು ತೀರಿಸಿಕೊಳ್ಳಬೇಕೆಂದು ಕಿರಣ್ ಪ್ರತಿಮಾರನ್ನು ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.