ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಲಿನ ದರ ಏರಿಸಿಲ್ಲ, ಕ್ವಾಂಟಿಟಿ ಹೆಚ್ಚಿಸಿದ್ದು, ಅದಕ್ಕೆ ದರ ನಿಗದಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮಧ್ಯೆ ಡಿಸಿಎಂ ಡಿ.ಕೆ.ಶಿವಕುಮಾರ್, ಹೆಚ್ಚುವರಿ 2 ರೂಪಾಯಿ ದರವನ್ನು ರೈತರಿಗೆ ನೀಡಲಾಗುವುದು ಎಂದಿದ್ದಾರೆ.
ನಂದಿನಿ ಹಾಲಿನ ದರ ಏರಿಕೆಗೆ ಬಿಜೆಪಿ ಆಕ್ರೋಶ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರು ಪಡುತ್ತಿರುವ ಸಂಕಷ್ಟದ ಬಗ್ಗೆ ಅವರಿಗೆ ಅರಿವಿಲ್ಲ. ಬಿಜೆಪಿಯವರು ರೈತ ವಿರೋಧಿಗಳು ಎಂದು ಕಿಡಿಕಾರಿದ್ದಾರೆ.
ಕೆ.ಎಂ.ಎಫ್ ಉಳಿದರೆ ರೈತರು ಉಳಿದಂತೆ. ರೈತರು ಸಾಲದಿಂದ ಹಸುಗಳನ್ನು, ಎಮ್ಮೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಜಾಸ್ತಿಯಾಗಿರುವ 2 ರೂಪಾಯಿ ಹಣ ರೈತರಿಗೆ ತಲುಪುತ್ತದೆ. ರೈತರಿಗೆ ಹಣ ತಲುಪುವುದಿಲ್ಲ ಎಂದು ಯಾರು ಹೇಳಿದ್ದಾರೆ? ಹೆಚ್ಚುವರಿ ಹಣ ರೈತರಿಗೆ ತಲುಪುತ್ತದೆ. ಬೇರೆ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ನೋಡಲಿ, ಮಾಹಿತಿ ಪಡೆಯಲಿ ಎಂದು ಹೇಳಿದರು.