ಬೆಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿರುವ ಬೆನ್ನಲ್ಲೇ ಹಾಲಿನ ದರವನ್ನು ಹೆಚ್ಚಿಸಿಸುವ ಮೂಲಕ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತೆ ಮಾಡಿದೆ. ಹಾಲಿನ ದರ ಏರಿಕೆಯಾಗಿರುವುದರಿಂದ ಇನ್ಮುಂದೆ ಹೋಟೆಲ್ ಗಳಲ್ಲಿ ಟೀ, ಕಾಫಿಯ ದರ ಕೂಡ ಹೆಚ್ಚಾಗಬಹುದು. ಬೆಲೆ ಏರಿಕೆಯಿಂದ ಚಹಾ, ಕಾಫಿ ಬಿಸಿ ಕೈಸುಡಲಿದೆಯೇ ಎಂಬ ಆತಂಕ ಗ್ರಾಹಕರಲ್ಲಿ ಆರಂಭವಾಗಿದೆ.
ಹಾಲಿನ ದರ ಏರಿಕೆಯಾಗಿರುವುದರಿಂದ ಸಹಜವಾಗಿಯೇ ಹೋಟೆಲ್ ಗಳಲ್ಲಿ ಟೀ, ಕಾಫಿ ದರ ಏರಿಸುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಂತಹ ನಗರಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಚಹಾ, ಕಾಫಿ ದರ ಇನ್ಮುಂದೆ ಹೆಚ್ಚಾಗಬಹುದು ಎಂದು ಜನಸಾಮಾನ್ಯರು ಭಾವಿಸಿದ್ದರು. ಆದರೆ ಗ್ರಾಹಕರಿಗೆ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳ ಸಂಘ ಕೊಂಚ ಸಮಾಧಾನಕರ ಸುದ್ದಿ ನೀಡಿದೆ.
ಹಾಲಿನ ದರ ಹೆಚ್ಚಳದಿಂದಾಗಿ ಹೋಟೆಲ್ ಗಳಲ್ಲಿ ಟೀ, ಕಾಫಿ, ಮತ್ತಿತರ ಪಾನೀಯಗಳ ದರ ಹೆಚ್ಚಾಗುವುದಿಲ್ಲ. ಟೀ, ಕಾಫಿ ದರದಲ್ಲಿ ಯಾವುದೇ ವ್ಯತ್ಯಾಸವಾಗದು ಎಂದು ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳ ಸಂಘ ಸ್ಪಷ್ಟ ಪಡಿಸಿದೆ. ಈ ಮೂಲಕ ಗ್ರಾಹಕರು ಹೋಟೆಲ್ ಗಳಲ್ಲಿ ನಿಶ್ಚಿಂತೆಯಿಂದ ಬಿಸಿ ಬಿಸಿ ಟೀ, ಕಾಫಿ ಸವಿಯಬಹುದು.
ಕೆಎಂಎಫ್ ಹಾಲಿನ ದರವನ್ನು ಹೆಚ್ಚಿಸಿಲ್ಲ. ಅರ್ಧ ಹಾಗೂ ಒಂದು ಲೀಟರ್ ಪ್ಯಾಕೇಟ್ ಗೆ 50ಎಂಎಲ್ ಹಾಲು ಹೆಚ್ಚಿಸಿದೆ. ಅದಕ್ಕೆ ಹೆಚ್ಚು ಶುಲ್ಕ ವಿಧಿಸಿದೆ. ಇದರಿಂದ ಹೋಟೆಲ್ ಮಾಲೀಕರಿಗೆ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ ಎಂದು ಸಂಘದ ಅಧ್ಯಕ್ಷ ಪಿ.ಸಿ ರಾವ್ ತಿಳಿಸಿದ್ದಾರೆ.