ಶುಕ್ರವಾರದಂದು ಭಾರತೀಯ ಸೇನೆಯ ಸ್ವದೇಶಿ ಸುಧಾರಿತ ಲಘು ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದ ವೇಳೆ ಅರುಣಾಚಲ ಪ್ರದೇಶದಲ್ಲಿ ಪತನಗೊಂಡು ಇಬ್ಬರು ಅಧಿಕಾರಿಗಳು ಮತ್ತು ಮೂವರು ಸೈನಿಕರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿತ್ತು. ಇದರಿಂದಾಗಿ ಹೆಲಿಕಾಪ್ಟರ್ ಹಾಗೂ ವಿಮಾನ ಅಪಘಾತಗಳಲ್ಲಿ ಕಳೆದ ಐದು ವರ್ಷಗಳಲ್ಲಿ 40 ಕ್ಕೂ ಅಧಿಕ ಮಂದಿ ಸೇನಾ ಸಿಬ್ಬಂದಿ ಸಾವಿಗೀಡಾದಂತಾಗಿದೆ.
2017 ರಿಂದ ಸಶಸ್ತ್ರ ಪಡೆಗಳು 20 ಹೆಲಿಕಾಪ್ಟರ್ ಅಪಘಾತಗಳನ್ನು ದಾಖಲಿಸಿದ್ದು ಇದರಲ್ಲಿ 40 ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರಲ್ಲದೆ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಅಪಘಾತಗಳ ಪೈಕಿ ಶೇಕಡಾ 90ರಷ್ಟು ಮಾನವ ದೋಷ ಹಾಗೂ ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ಹೇಳಲಾಗಿದೆ. ಇನ್ನುಳಿದ ಅಪಘಾತಗಳು ಹಕ್ಕಿಗಳ ಬಡಿತ ಸೇರಿದಂತೆ ಇತರೆ ಕಾರಣಗಳಿಂದ ಸಂಭವಿಸಿದೆ.
ಕಳೆದ ವರ್ಷದ ಡಿಸೆಂಬರ್ ನಲ್ಲಿ ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಇಡೀ ದೇಶದ ಜನತೆಯನ್ನು ದಿಗ್ಭ್ರಾಂತರನ್ನಾಗಿ ಮಾಡಿತ್ತು. ಬಹಳಷ್ಟು ಅಪಘಾತಗಳಿಗೆ ಪ್ರತಿಕೂಲ ಹವಾಮಾನ, ಬೆಟ್ಟಗಳ ಮಧ್ಯದಲ್ಲಿನ ಹಾರಾಟ ಹಾಗೂ ಗೋಚರತೆ ಇದ್ದಕ್ಕಿದ್ದಂತೆ ಕಡಿಮೆಯಾಗುವುದು ಕಾರಣ ಎಂದು ಹೇಳಲಾಗಿದೆ.