ಇತ್ತೀಚಿನ ದಿನಗಳಲ್ಲಿ, ಲಾಕ್ ಡೌನ್, ಕರ್ಪ್ಯೂ ಜೊತೆಗೆ ನೆನಪಾಗೋದೆ, ಗಂಟುಮೂಟೆ ಕಟ್ಟಿಕೊಂಡು ರೈಲಿನಲ್ಲೊ, ಬಸ್ಸಿನಲ್ಲೊ, ಬೈಕ್ ನಲ್ಲೊ ಸಂಸಾರ ಸಮೇತ ಊರು ಬಿಡುವ ಕಾರ್ಮಿಕರ ದೃಶ್ಯಗಳು. ಒಂದೆರಡು ತಿಂಗಳ ಹಿಂದೆ ಸಾಮಾನ್ಯ ಪರಿಸ್ಥಿತಿಗೆ ತಲುಪಿದ್ದ ಜನಜೀವನ ಈಗ ಮತ್ತೊಮ್ಮೆ ವಲಸೆ ಪರ್ವಕ್ಕೆ ಬಂದು ನಿಂತಿದೆ. ಕೆಲಸ ಹುಡುಕಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಮಹಾನಗರಗಳಿಗೆ ಬರುವ ಕಾರ್ಮಿಕರು ಸಾಂಕ್ರಾಮಿಕದ ಹೊಸ ಅಲೆಗಳು ಶುರುವಾಗ್ತಿದ್ದಂತೆ, ಕರ್ಮಭೂಮಿಯನ್ನ ತೊರೆದು ಜನ್ಮಭೂಮಿಗೆ ತೆರಳುತ್ತಾರೆ.
ಈಗ ಒಮಿಕ್ರಾನ್, ಕೊರೋನಾ ಜಾಸ್ತಿಯಾಗಿ ಮೂರನೇ ಅಲೆ ಶುರುವಾಗುತ್ತಿದೆ. ದೆಹಲಿಯಂತಹ ಮೆಟ್ರೋ ನಗರಗಳು ಕೊರೋನಾ ನಿಯಂತ್ರಿಸಲು ಕಠಿಣ ನಿಯಮಗಳ ಜೊತೆ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಹೇರಿದ್ದಾರೆ. ಇನ್ನು ಲಾಕ್ ಡೌನ್ ಜಾರಿಯಾಗಿಲ್ಲ, ಆದರೆ ವಲಸೆ ಕಾರ್ಮಿಕರು ಮಾತ್ರ ಲಾಕ್ ಡೌನ್ ಭಯದಲ್ಲಿ ಸಂಸಾರ ಸಮೇತರಾಗಿ ತಾಯಿನಾಡಿಗೆ ಹೋಗುತ್ತಿದ್ದಾರೆ. ಒಂದು ವೇಳೆ ಲಾಕ್ ಡೌನ್ ಆದರೆ ಕಳೆದ ಬಾರಿಯಂತೆಯೆ ಆಹಾರಕ್ಕು ಗತಿ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗಬಹುದು. ಈಗಾಗ್ಲೇ ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಇದೆ, ಲಾಕ್ ಡೌನ್ ಸಹ ಆಗಬಹುದು ಅದಕ್ಕು ಮುಂಚೆಯೆ ನಗರ ಬಿಟ್ಟು ಊರು ಸೇರಿಕೊಳ್ಳೋದು ಉತ್ತಮ ಅಂತಾರೆ ಊರಿಗೆ ಹೊರಡುತ್ತಿರುವ ಕಾರ್ಮಿಕರು.
ದೆಹಲಿಯಲ್ಲಿ ಈಗಾಗ್ಲೇ ದೈನಂದಿನ ಪ್ರಕರಣಗಳೆ 20ಸಾವಿರಕ್ಕು ಹೆಚ್ಚಿನ ಗಡಿಯನ್ನ ದಾಟಿದೆ. ಮುಂದಿನ ದಿನಗಳಲ್ಲಿ ಕೊರೋನಾ ಇನ್ನಷ್ಟು ಜಾಸ್ತಿಯಾಗಬಹುದು, ಆಗ ಸರ್ಕಾರ ಲಾಕ್ ಡೌನ್ ಮಾಡಿಯೆ ಮಾಡುತ್ತದೆ ಎಂದು ಹೇಳಿ ನೌಕರರು ದೆಹಲಿ ನಗರವನ್ನ ಬಿಡುತ್ತಿದ್ದಾರೆ. ಲಾಕ್ ಡೌನ್ ಆಗಲ್ಲ ಹೋಗಬೇಡಿ ಎಂದರು ನಮ್ಮ ಮಾತು ಕೇಳದೆ ವಾಪಸ್ಸಾಗುತ್ತಿದ್ದಾರೆ ಎಂದು ಹಲವು ಮೇಸ್ತ್ರಿಗಳು, ಮಾಲೀಕರು ಹೇಳಿದ್ದಾರೆ. ಇಲ್ಲಿದ್ದು, ಲಾಕ್ ಡೌನ್ ನಲ್ಲಿ ನಿರುದ್ಯೋಗ, ಆರೋಗ್ಯ ಸಮಸ್ಯೆ, ಆಹಾರ ಕೊರತೆ ಅನುಭವಿಸುವುದಕ್ಕಿಂತ ಊರಿಗೆ ಹೋಗಿ ಒಂದೆರಡು ತಿಂಗಳು ನೆಮ್ಮದಿಯಾಗಿರುತ್ತಿವಿ. ಒಂದು ವೇಳೆ ಲಾಕ್ ಡೌನ್ ಮಾಡದಿದ್ದರೆ ವಾಪಸ್ಸು ಬರುತ್ತೇವೆ ಎಂಬುದು ಊರು ಬಿಡುತ್ತಿರುವ ವಲಸೆ ಕಾರ್ಮಿಕರ ಅಭಿಪ್ರಾಯ.