ಕೋಲ್ಕತ್ತಾ: ಕೇರಳದ ಕೊಚ್ಚಿಯಲ್ಲಿ ವಲಸೆ ಕಾರ್ಮಿಕರೊಬ್ಬರಿಗೆ ಲಾಟರಿಯಲ್ಲಿ 75 ಲಕ್ಷ ರೂ. ಬಹುಮಾನ ಬಂದಿದೆ. ತಮ್ಮ ಬಹುಮಾನದ ಹಣಕ್ಕೆ ರಕ್ಷಣೆ ಪಡೆಯಲು ಅವರು ಪೊಲೀಸ್ ಠಾಣೆಗೆ ಧಾವಿಸಿದ್ದಾರೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.
75 ಲಕ್ಷ ರೂ. ಬಹುಮಾನ ಗೆದ್ದ ನಂತರ ವಲಸೆ ಕೆಲಸಗಾರ ಮುವಾಟ್ಟುಪುಳ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದಾನೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ಕೋಲ್ಕತ್ತಾ ಮೂಲದ ಎಸ್.ಕೆ. ಬಡೇಶ್ ಎಂದು ಗುರುತಿಸಲಾದ ಕಾರ್ಮಿಕ ಕೇರಳ ಸರ್ಕಾರದ ಶ್ರೀ ಶಕ್ತಿ ಲಾಟರಿಯ 75 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. ಗೆದ್ದ ನಂತರ ಯಾರಾದರೂ ಟಿಕೆಟ್ ಕಿತ್ತುಕೊಳ್ಳುತ್ತಾರೆ ಎಂಬ ಭಯ ಅವರಲ್ಲಿತ್ತು. ಹೀಗಾಗಿ ಮಂಗಳವಾರ ರಾತ್ರಿ ಗಾಬರಿಯಿಂದ ಪೊಲೀಸರ ಮೊರೆ ಹೋಗಿದ್ದಾರೆ. ಮುವಾಟ್ಟುಪುಳ ಪೊಲೀಸ್ ಠಾಣೆಯ ಪೊಲೀಸರು ಆತನನ್ನು ಸಮಾಧಾನಪಡಿಸಿದ್ದಾರೆ. ಲಾಟರಿ ಬಹುಮಾನವನ್ನು ಹೇಗೆ ಎನ್‌ಕ್ಯಾಶ್ ಮಾಡುವುದು ಎಂಬುದರ ಕುರಿತು ಅವರಿಗೆ ಮಾರ್ಗದರ್ಶನ ನೀಡಿದ್ದಾರೆ.
ಕೇರಳದ ಎರ್ನಾಕುಲಂನ ಚೊಟ್ಟನಿಕ್ಕರದಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ತೆರಳಿದ್ದ ವೇಳೆ ಬಡೇಶ್ ಟಿಕೆಟ್ ಖರೀದಿಸಿದ್ದರು. ಲಾಟರಿ ಬಹುಮಾನವನ್ನು ನಗದೀಕರಿಸಿದ ನಂತರ ಬಡೇಶ್ ತನ್ನ ಊರಿಗೆ ಮರಳಲು ಉತ್ಸುಕನಾಗಿದ್ದಾರೆ. ಹಲವಾರು ಬಾರಿ ಲಾಟರಿ ಖರೀದಿಸಿದ್ದರೂ ಬಹುಮಾನ ಬಂದಿರಲಿಲ್ಲ. ಇದೀಗ ಲಾಟರಿ ಗೆದ್ದ ನಂತರ ಮತ್ತೆ ಕೋಲ್ಕತ್ತಾಗೆ ಹೋಗಿ ಮನೆ ನವೀಕರಿಸಿ ಕೃಷಿ ವಿಸ್ತರಿಸಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.