ತನ್ನ ಒಡೆತನದ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ರಿಸೆಪ್ಶನ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಪ್ರಭಾವಿ ನಾಯಕರೊಬ್ಬರ ಪುತ್ರ ಆರೋಪಿಯಾಗಿದ್ದಾನೆ. ಆರೋಪಿಯನ್ನು ಈಗ ಬಂಧಿಸಲಾಗಿದ್ದು, ಆತನ ಮಾಲೀಕತ್ವದ ರೆಸಾರ್ಟ್ ಅನ್ನು ನೆಲಸಮಗೊಳಿಸಲಾಗಿದೆ ಇಂಥದೊಂದು ಘಟನೆ ಉತ್ತರಾ ಖಂಡದ ಪೌರಿ ಜಿಲ್ಲೆಯಲ್ಲಿ ನಡೆದಿದೆ.
ಋಷಿಕೇಶ ಬಳಿ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿನೋದ್ ಆರ್ಯ ಅವರ ಪುತ್ರ ಫುಲ್ಕಿತ್ ಆರ್ಯ ರೆಸಾರ್ಟ್ ನಡೆಸುತ್ತಿದ್ದು, ಕೊಲೆಯಾದ 19 ವರ್ಷದ ಯುವತಿ ಇಲ್ಲಿ ರಿಸೆಪ್ಶನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ಹೇಳಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಯುವತಿ ಕಾಣೆಯಾದ ಬಳಿಕ ಆಕೆಯ ಕುಟುಂಬದವರೊಂದಿಗೆ ಸೇರಿ ಪುಲ್ಕಿತ್ ಪೊಲೀಸರಿಗೆ ದೂರು ನೀಡಿದ್ದ.
ತನಿಖೆ ಕೈಗೊಂಡ ಪೊಲೀಸರು ಇದೀಗ ಪುಲ್ಕಿತ್ ಆರ್ಯ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ರೆಸಾರ್ಟ್ ಮಾಲೀಕನೇ ತನ್ನ ಬಳಿ ಕೆಲಸಕ್ಕೆ ಇದ್ದ ಯುವತಿಯನ್ನು ಹತ್ಯೆ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರ ಆಕ್ರೋಶ ಮುಗಿಲು ಮುಟ್ಟಿದೆ. ಉತ್ತರಾಖಂಡ ಮುಖ್ಯಮಂತ್ರಿ ಪಿ.ಎಸ್. ಧಾಮಿ ಅವರ ಸೂಚನೆಯಂತೆ ಪುಲ್ಕಿತ್ ಆರ್ಯನಿಗೆ ಸೇರಿದ ವನತಾರಾ ರೆಸಾರ್ಟ್ ನೆಲಸಮಗೊಳಿಸಲಾಗಿದೆ. ಅಲ್ಲದೆ ಯಾವುದೇ ಒತ್ತಡಕ್ಕೆ ಒಳಗಾಗದೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.