ನವದೆಹಲಿ: ಆದಾಯ ತೆರಿಗೆ ಇಳಿಕೆಯಾದರೆ ಅನುಭೋಗ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಮಧ್ಯಮ ವರ್ಗಕ್ಕೆ ವರದಾನವಾಗುತ್ತದೆ. ಇದು ಸಬ್ಸಿಡಿ, ಕಲ್ಯಾಣ ಯೋಜನೆಗಳಿಗಿಂತ ಮಿಗಿಲಾಗಿದ್ದು, ಮುಂದಿನ ತಿಂಗಳು ಮಂಡನೆಯಾಗಲಿರುವ ಕೇಂದ್ರ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ.
ಮೈತ್ರಿಕೂಟದ ಬಲದಿಂದ ಮೋದಿ ಪ್ರಧಾನಿಯಾಗಿರುವುದರಿಂದ ಎಂದಿನಂತೆ ಈ ಬಾರಿ ಬಜೆಟ್ ಇರುವುದಿಲ್ಲ. ಮಿತ್ರ ಪಕ್ಷಗಳ ಸಲಹೆಯನ್ನು ಕೂಡ ಪರಿಗಣಿಸಬೇಕಿದೆ. ಈ ಬಾರಿ ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಿಸಲಾಗುವುದು ಎಂದು ತಜ್ಞರು ಲೆಕ್ಕಾಚಾರ ಮಾಡತೊಡಗಿದ್ದಾರೆ.
ಮಧ್ಯಮ ವರ್ಗದಲ್ಲಿ ಹೆಚ್ಚು ಹಣ ಉಳಿದಾಗ ಅವರ ಅನುಭೋಗ ವೆಚ್ಚ ಏರಿಕೆಯಾಗುತ್ತದೆ. ಇದು ಜಿಡಿಪಿ ಬೆಳವಣಿಗೆ ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ತೆರಿಗೆ ನಿತಿ ದರವನ್ನು 3 ರಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಲು ಸರ್ಕಾರ ಯೋಜಿಸುತ್ತಿದೆ. ಇದು ಕಡಿಮೆ ಆದಾಯದ ಕುಟುಂಬಗಳಿಗೆ ಬಲ ನೀಡಲಿದ್ದು, ಅವರ ಆದಾಯ ಹೆಚ್ಚಿಸುತ್ತದೆ.
ಸಬ್ಸಿಡಿ ಮತ್ತು ಇತರೆ ಯೋಜನೆಗಳ ಮೇಲೆ ವೆಚ್ಚವನ್ನು ಹೆಚ್ಚು ಮಾಡುವುದಕ್ಕಿಂತಲೂ ತೆರಿಗೆ ದರ ಕಡಿತ ಉತ್ತಮ ಮಾರ್ಗವಾಗಿದೆ. ಕಲ್ಯಾಣ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗಿಂತ ಅನುಕೂಲ ಇರುವವರು ಕಬಳಿಸುತ್ತಾರೆ. ತೆರಿಗೆ ದರ ಕಡಿತ ಹೆಚ್ಚು ಉಪಯುಕ್ತ ಎಂದು ಹಣಕಾಸು ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.