ಬೆಂಗಳೂರು: ವಿಶ್ವದಾದ್ಯಂತ ಮೈಕ್ರೋಸಾಫ್ಟ್ ಸಾಫ್ಟ್ ವೇರ್ ನಲ್ಲಿ ಸಮಸ್ಯೆಯಾಗಿದ್ದು, ಜಗತ್ತಿನಾದ್ಯಂತ ಆನ್ ಲೈನ್ ಸೇವೆ ಅಲ್ಲೋಲ-ಕಲ್ಲೋಲವಾಗಿದೆ.
ಮೈಕ್ರೋಸಾಫ್ಟ್ ನ ‘ಕ್ಲೌಡ್’ ಸರ್ವಿಸ್ ನಲ್ಲಿ ತಾಂತ್ರಿಕ ದೋಷವುಂಟಾದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದ್ದು, ಜಗತ್ತಿನಾದ್ಯಂತ ಆನ್ ಲೈನ್ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಯವುಂಟಾಗಿದೆ.
ಮೈಕ್ರೋಸಾಫ್ಟ್ ಸಾಫ್ಟ್ ವೇರ್ ನಲ್ಲಿ ತಾಂತ್ರಿಕ ದೋಷದಿಂದಾಗಿ ಷೇರುಮಾರುಕಟ್ಟೆ, ಬ್ಯಾಂಕಿಂಗ್ ಕ್ಷೇತ್ರ, ವಿಮಾನ ಹಾರಾಟ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದ್ದು, ಆನ್ ಲೈನ್ ವ್ಯವಸ್ಥೆಯಲ್ಲಿ ವ್ಯತ್ಯಯವುಂಟಾಗಿದೆ. ಜನರು ಪರದಾಟ ನಡೆಸಿದ್ದಾರೆ.
ಮೈಕ್ರೋ ಸಾಫ್ಟ್ ಸಾಫ್ಟ್ ವೇರ್ ತಾಂತ್ರಿಕ ಸಮಸ್ಯೆಯಿಂದಾಗಿ ಭಾರತದ ಆನ್ ಲೈನ್ ವ್ಯವಸ್ಥೆಗೂ ಬಿಸಿತಟ್ಟಿದ್ದು, ಮುಂಬೈ ಷೇರು ಮಾರುಕಟ್ಟೆ, ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ ಇಂದಿರಾಗಾಂಧಿ ಅಂತರಾಷ್ರೀಯ ವಿಮಾನ ನಿಲ್ದಾಣ, ಗೋವಾ ಏರ್ ಪೋರ್ಟ್ ಗಳಲ್ಲಿ ಎಲ್ಲಾ ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿದೆ. ಚೆಕ್ ಇನ್, ಚೆಕ್ ಔಟ್, ಟಿಕೆಟ್ ಬುಕ್ಕಿಂಗ್ ಕೂಡ ಸಾಧ್ಯವಾಗದೇ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಏರ್ ಪೋರ್ಟ್ ಅಧಿಕಾರಿಗಳು, ಸಿಬ್ಬಂದಿಗಳು ಪರದಾಟ ನಡೆಸಿದ್ದಾರೆ. ಮ್ಯಾನುವಲ್ ಮೂಲಕವಾಗಿ ಏರ್ ಪೋರ್ಟ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ವಿಮಾನ ಸೇವೆಯಲ್ಲಿ ವಿಳಂಬವಾಗಿದೆ.