ವಿಂಡೋಸ್ ಎಕ್ಸ್ ಪಿ ಯಲ್ಲಿ ಡೀಫಾಲ್ಟ್ ವಾಲ್ಪೇಪರ್ ಆಗಿ ಬಂದ ಐಕಾನಿಕ್ ಗುಡ್ಡಗಾಡು ಲ್ಯಾಂಡ್ಸ್ಕೇಪ್ ಚಿತ್ರವನ್ನು ನೀವು ನೋಡಿರಬಹುದು. ಡೆಸ್ಕ್ಟಾಪ್ ವಾಲ್ಪೇಪರ್ ಅನ್ನು ಬ್ಲಿಸ್ ಎಂದು ಕರೆಯಲಾಗುತ್ತದೆ.
ಇದು ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಫೋಟೋ ಎಂದೇ ಹೇಳಲಾಗುತ್ತದೆ. ಆದರೆ, ಫೋಟೋ ತೆಗೆದವರು ಯಾರು ಗೊತ್ತಾ ? ಮತ್ತು ಅದರ ಛಾಯಾಗ್ರಾಹಕನಿಗೆ ಮೈಕ್ರೋಸಾಫ್ಟ್ ಎಷ್ಟು ಪಾವತಿಸಿದೆ ಎಂಬುದು ನಿಮಗೆ ತಿಳಿದಿದೆಯೇ ?
ಜನವರಿ 1996 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ತನ್ನ ಭಾವಿ ಪತ್ನಿಯನ್ನು ಭೇಟಿಯಾಗಲು ಹೊರಟಿದ್ದಾಗ ಛಾಯಾಗ್ರಾಹಕ ಚಕ್ ಓರಿಯರ್ ಅವರು ಬ್ಲಿಸ್ ಅನ್ನು ಕ್ಲಿಕ್ ಮಾಡಿದ್ರು.
ನ್ಯಾಷನಲ್ ಜಿಯಾಗ್ರಫಿಕ್ನಲ್ಲಿ ಕೆಲಸ ಮಾಡಿದ ಚಕ್ ಓರಿಯರ್ ಅವರು ಎಲ್ಲೇ ಹೋದ್ರೂ ತಮ್ಮ ಜೊತೆ ಕ್ಯಾಮರಾವನ್ನು ಒಯ್ಯುತ್ತಾರೆ. ವಾಹನ ಚಾಲನೆ ಮಾಡುವಾಗ ಆಗಾಗ ನಿಲ್ಲಿಸುತ್ತಾ ಫೋಟೋ ಕ್ಲಿಕ್ಕಿಸುತ್ತಾರೆ.
ಸುಂದರವಾದ ಹಸಿರು ಬೆಟ್ಟಗಳನ್ನು ಸೆರೆಹಿಡಿದ ದಿನವನ್ನು ಓರಿಯರ್ ನೆನಪಿಸಿಕೊಂಡಿದ್ದಾರೆ. ಚಳಿಗಾಲದ ಮಧ್ಯಭಾಗದಲ್ಲಿ ಹುಲ್ಲು ಹಸಿರಾಗುತ್ತಿದೆ ಮತ್ತು ಆಕಾಶವು ಸುಂದರವಾದ ಬಿಳಿ ಮೋಡಗಳನ್ನು ಹೊಂದಿತ್ತು.
ಈ ವೇಳೆ ತಮ್ಮ ಫಿಲ್ಮ್ ಕ್ಯಾಮರಾವನ್ನು ತೆಗೆದುಕೊಂಡು ಸುಂದರವಾದ ಬೆಟ್ಟಗಳ ದೃಶ್ಯವನ್ನು ಸೆರೆಹಿಡಿದ್ರು. ಮುಂದೊಂದು ದಿನ ಆ ಫೋಟೋವನ್ನು ಮೈಕ್ರೋಸಾಫ್ಟ್ ಖರೀದಿಸುತ್ತದೆ. ಹಾಗೂ ಪ್ರಪಂಚದಾದ್ಯಂತದ ಪ್ರತಿಯೊಂದು ಕಂಪ್ಯೂಟರ್ನಲ್ಲಿ ಡೀಫಾಲ್ಟ್ ಡೆಸ್ಕ್ಟಾಪ್ ಇಮೇಜ್ ಆಗುತ್ತದೆ ಎಂಬುದರ ಅರಿವೇ ಅವರಿಗಿರಲಿಲ್ಲ.
ಚಕ್ ಓರಿಯರ್ ತಾನು ತೆಗೆದಿರುವ ಫೋಟೋವನ್ನು ಕಾರ್ಬಿಸ್, ಸ್ಟಾಕ್ ಫೋಟೋ ಏಜೆನ್ಸಿಗೆ ಸಲ್ಲಿಸಿದರು. ನಂತರ, ಮೈಕ್ರೋಸಾಫ್ಟ್ ಅದನ್ನು ಬ್ಲಿಸ್ ಎಂದು ಹೆಸರಿಸುವ ಮೊದಲು ಖರೀದಿಸಿತು.
ಬಹಿರಂಗಪಡಿಸದಿರುವ ಒಪ್ಪಂದದ ಕಾರಣದಿಂದಾಗಿ ಫೋಟೋಗಾಗಿ ಮೈಕ್ರೋಸಾಫ್ಟ್ ಪಾವತಿಸಿದ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಇದು ಒಂದೇ ಫೋಟೋಗೆ ಪಾವತಿಸಿದ ಅತಿದೊಡ್ಡ ಮೊತ್ತವಾಗಿದೆ.
ವರದಿಯೊಂದರ ಪ್ರಕಾರ, ಮೈಕ್ರೋಸಾಫ್ಟ್ನಿಂದ ಬ್ಲಿಸ್ ಫೋಟೋಗಾಗಿ ಚಕ್ ಓರಿಯರ್ 100,000 ಡಾಲರ್ ಕ್ಕಿಂತ ಹೆಚ್ಚು ಪಡೆದಿದ್ದಾರೆ ಎನ್ನಲಾಗಿದೆ. ಟೆಕ್ ದೈತ್ಯ ಮೈಕ್ರೋಸಾಫ್ಟ್ ಎಕ್ಸ್ ಪಿ ಗಾಗಿ ಬಳಸಲಾದ ಶರತ್ಕಾಲದ ವಾಲ್ಪೇಪರ್ ಅನ್ನು ಸಹ ಖರೀದಿಸಿದೆ. ಇದನ್ನು ಪೀಟರ್ ಬುರಿಯನ್ ಅವರು ಕ್ಲಿಕ್ ಮಾಡಿದ್ದಾರೆ.