ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಕೋವಿಡ್ ಬಳಿಕ ಅನೇಕ ಪ್ರಸಿದ್ಧ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಸಾಲು ಸಾಲಾಗಿ ಮನೆಗೆ ಕಳಿಸುತ್ತಿವೆ. ಇದರಿಂದಾಗಿ ಉದ್ಯೋಗಿಗಳು ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ಗೂಗಲ್, ಮೆಟಾ, ಟ್ವಿಟರ್ ನಂತೆಯೇ ಇದೀಗ ಮೈಕ್ರೋಸಾಫ್ಟ್ ಸರದಿ. ಮೈಕ್ರೋಸಾಫ್ಟ್ ಕಂಪನಿ ಮತ್ತೊಮ್ಮೆ ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದ್ದು ಸಿಬ್ಬಂದಿ ಆತಂಕದಲ್ಲಿದ್ದಾರೆ.
ಮೈಕ್ರೋಸಾಫ್ಟ್ ಕಂಪನಿ ಸಿಬ್ಬಂದಿ ವಜಾಗೊಳಿಸುವಿಕೆಯನ್ನು ಕಳೆದ ವಾರ ನಡೆಸಿದ್ದು ಸುಮಾರು 276 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಕಂಪನಿ ನಿರ್ಧಾರದಿಂದ ಕಂಗೆಟ್ಟ ಹಲವು ಉದ್ಯೋಗಿಗಳು ಲಿಂಕ್ಡ್ ಇನ್ ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಅದರಲ್ಲೊಬ್ಬರು ತಮ್ಮ ವೃತ್ತಿಜೀವನದ ಆರಂಭದಿಂದಲೂ ಇದು ಕಂಪನಿಯಲ್ಲಿನ ಮೂರನೇ ವಜಾ ಎಂದು ಬಹಿರಂಗಪಡಿಸಿದ್ದಾರೆ. ಒಂದೂವರೆ ವರ್ಷದಿಂದ ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ತಾನು ಇತ್ತೀಚೆಗೆ ವಜಾಗೊಂಡಿದ್ದೇನೆ ಎಂದಿದ್ದಾರೆ.
“ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡಲು ಮತ್ತು ಹಲವಾರು ವೈವಿಧ್ಯಮಯ ಮತ್ತು ಪ್ರತಿಭಾವಂತ ಜನರನ್ನು ಭೇಟಿ ಮಾಡಲು ಅದ್ಭುತ ಅವಕಾಶವನ್ನು ಪಡೆದಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಇದು ಮೂರನೇ ಬಾರಿಯ ವಜಾ. ಮೊದಲ ಬಾರಿಗೆ ಕಂಪನಿ ದಿವಾಳಿತನದಿಂದ ವಜಾಗೊಳಿಸಲಾಗಿತ್ತು. ಎರಡನೇ ಬಾರಿ ಕೋವಿಡ್ 19 ಕಾರಣದಿಂದ. ಇದೀಗ ಮೂರನೇ ಬಾರಿಗೆ. ಪ್ರತಿ ಬಾರಿ ವಜಾ ಮಾಡಿದ ನಂತರ ಹೊಸ ಪ್ರಯಾಣದಲ್ಲಿ. ನಾನು ಹೊಸ ಪ್ರಯಾಣವನ್ನು ಕಂಡುಕೊಳ್ಳಲು ಉತ್ಸುಕಳಾಗಿದ್ದೇನೆ” ಎಂದು ಮಹಿಳೆ ಹೇಳಿದ್ದಾರೆ.
ಅದೇ ರೀತಿ ಕಳೆದ 10 ವರ್ಷದಿಂದ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮೈಕ್ರೋಸಾಫ್ಟ್ ನ ಹಿರಿಯ ಸಿಬ್ಬಂದಿ ಸಹ ಇದೀಗ ಕೆಲಸ ಕಳೆದುಕೊಂಡಿದ್ದಾರೆ. ಮೈಕ್ರೋಸಾಫ್ಟ್ ಕಳೆದ ವಾರ 276 ಜನರನ್ನು ವಜಾಗೊಳಿಸಿದೆ. ಇದಕ್ಕೂ ಮೊದಲು ಈ ವರ್ಷದ ಜನವರಿಯಲ್ಲಿ ಮೈಕ್ರೋಸಾಫ್ಟ್ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು.