ನವದೆಹಲಿ: ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಇಂದು ಸ್ವೀಕರಿಸಿದರು. ಸ್ಯಾನ್ ಫ್ರಾನ್ಸಿಸ್ಕೋದ ಭಾರತದ ಕಾನ್ಸುಲ್ ಜನರಲ್ ಡಾ ಟಿವಿ ನಾಗೇಂದ್ರ ಪ್ರಸಾದ್ ಅವರಿಂದ ವಿಶಿಷ್ಟ ಸೇವೆಗಾಗಿ ಔಪಚಾರಿಕವಾಗಿ ಪ್ರಶಸ್ತಿಯನ್ನು ಅವರು ಪಡೆದುಕೊಂಡರು.
ಈ ಬಾರಿಯ ಪದ್ಮ ಪ್ರಶಸ್ತಿ ಪುರಸ್ಕೃತ 17 ಮಂದಿಯಲ್ಲಿ ಸತ್ಯ ಒಬ್ಬರಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸತ್ಯ, ‘ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ತೀವ್ರ ಹೆಮ್ಮೆ ಮತ್ತು ಗೌರವ ಎನಿಸುತ್ತದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಲು ತಂತ್ರಜ್ಞಾನವನ್ನು ಬಳಕೆಗೆ ಸಹಾಯ ಮಾಡಲು ಭಾರತದಾದ್ಯಂತದ ಕೆಲಸ ಮಾಡಲು ನಾನು ಇದಿರು ನೋಡುತ್ತಿದ್ದೇನೆ’ ಎಂದರು.
‘ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ಹಲವಾರು ಅಸಾಧಾರಣ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡಿರುವುದು ಗೌರವವಾಗಿದೆ. ನಾನು ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ’ ಎಂದಿರುವ ಸತ್ಯ, ಮುಂದಿನ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲು ಯೋಜನೆ ರೂಪಿಸಿದ್ದಾರೆ.
ಅಂದಹಾಗೆ, ನಾಡೆಲ್ಲಾ ಅವರು ಹೈದರಾಬಾದ್ ಮೂಲದವರು. 2014ರ ಫೆಬ್ರುವರಿಯಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡಿದ್ದಾರೆ. 2021ರ ಜೂನ್ನಲ್ಲಿ ಅವರು ಕಂಪೆನಿಯ ಅಧ್ಯಕ್ಷರಾಗಿ ಬಡ್ತಿ ಪಡೆದರು.