ಹಾವೇರಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನೊಂದೆಡೆ ಮಹಿಳೆಯರು ತಮ್ಮ ಮಾಂಗಲ್ಯ ಭಾಗ್ಯ ಉಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಂಗಲ್ಯ ಕಳುಸಿಸಿ ವಿಶೇಷ ಅಭಿಯಾನ ನಡೆಸುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ನಿಂದಾಗಿ ನಮ್ಮ ಮಾಂಗಲ್ಯಕ್ಕೆ ಕುತ್ತುಬಂದಿದೆ. ಸಾಲ ಪಡೆದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಗಂಡಂದಿರ ಜೀವ ಉಳಿಸಿ, ನಮ್ಮ ಮಾಂಗಲ್ಯ ಭಾಗ್ಯ ಕಾಪಾಡಿ ಎಂದು ಹಾವೇರಿ ಮಹಿಳೆಯರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮಾಂಗಲ್ಯ ಸರ ಪೋಸ್ಟ್ ಮಾಡಿದ್ದಾರೆ.
ಹಾವೇರಿ ಪ್ರಧಾನ ಅಂಚೆ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ಅಂಚೆ ಮೂಲಕ ಮಾಂಗಲ್ಯ ಹಾಗೂ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಪೋಸ್ಟ್ ಮಾಡಿ ನಮ್ಮ ಮಾಂಗಲ್ಯ ಕಾಪಾಡಿ ಎಂದು ಮನವಿ ಮಾಡಿದ್ದಾರೆ.
ಬಳಿಕ ಜಿಲ್ಲಾಡಳಿತ ಹಾಗೂ ಎಸ್ ಪಿ ಕಚೇರಿಗೂ ಆಗಮಿಸಿ ಮಾಂಗಲ್ಯ ಪತ್ರವನ್ನು ನೀಡಿ ಮನವಿ ಸಲ್ಲಿಸಿದ್ದಾರೆ. ವಿನಾಕಾರಣ ಮೈಕ್ರೋ ಫೈನಾನ್ಸ್ ನವರು ಮನೆ ಮುಂದೆ ಪ್ರತಿದಿನ ಬಂದು ಕಿರುಕುಳ ನೀಡುತ್ತಿದ್ದಾರೆ. ಅವರ ಕಿರುಕುಳ, ಕಟಕ್ಕೆ ಮುಕ್ತಿ ಕೊಟ್ಟು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.