ಹೈದರಾಬಾದ್: ತಮಿಳುನಾಡಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಮಿಚಾಂಗ್ ಚಂಡಮಾರುತ ಈಗ ಆಂಧ್ರ ಪ್ರದೇಶದ ಕರಾವಳಿ ಮೇಲೆ ಪ್ರಭಾವ ಬೀರಿದೆ. ಆಂಧ್ರದ ಬಾಪಟ್ಲಾ ಕರಾವಳಿಗೆ ಚಂಡಮಾರುತ ಅಪ್ಪಳಿಸಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.
ಮಿಚಾಂಗ್ ಚಂಡಮಾರುತ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ 8 ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದಿಂದಾಗಿ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಡಿಸೆಂಬರ್ 7ರವರೆಗೂ ಸೈಕ್ಲೋನ್ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಂಧ್ರದ 8 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ನೆಲ್ಲೂರು, ತಿರುಪತಿ, ಪ್ರಕಾಶಂ, ಬಾಪಟ್ಲಾ, ಕೋನಾಸೀಮಾ, ಕಾಕಿನಾಡ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
ತಮಿಳುನಾಡಿನಲ್ಲಿ ಮಿಚಾಂಗ್ ಅಬ್ಬರಕ್ಕೆ ಜನಜೀವನ ತತ್ತರಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಚೆನ್ನೈ ನಗರಿಯಲ್ಲಿ ಜಲಪ್ರಳಯ ಸೃಷ್ಟಿಯಾಗಿದೆ. ಬಸ್, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳಿಗೂ ನೀರು ನುಗ್ಗಿದೆ.