ಬೆಂಗಳೂರು: ಬೆಂಗಳೂರು ಮೆಟ್ರೋ ರೈಲಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣವನ್ನು ಹಲಸೂರು ಗೇಟ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರದ ಕಾಲೇಜೊಂದರ 20 ವರ್ಷದ ವಿದ್ಯಾರ್ಥಿನಿ, ಎಂ.ಜಿ.ರಸ್ತೆಯಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬರುವ ವೇಳೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣವನ್ನು ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಕಬ್ಬನ್ ಪಾರ್ಕ್ ಠಾಣೆಯಿಂದ ಹಲಸೂರು ಗೇಟ್ ಠಾಣೆಗೆ ವರ್ಗಾಯಿಸಲಾಗಿದೆ.
ವಿದ್ಯಾರ್ಥಿನಿ ಸೆ.9ರಂದು ಸ್ನೇಹಿತೆ ಜೊತೆ ಮೆಜೆಸ್ಟಿಕ್ ಗೆ ಹೋಗಲು ಎಂ.ಜಿ.ರಸ್ತೆಯಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ ಟ್ರೇನ್ ಹತ್ತಿದ್ದಳು. ಸೆಂಟ್ರಲ್ ಕಾಲೇಜು ನಿಲ್ದಾಣ ಬಳಿ ರೈಲು ಚಲಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ. ಭಯದಿಂದ ಸ್ವಲ್ಪದೂರ ಹೋಗಿ ನಿಂತರೂ ವ್ಯಕ್ತಿ ದುರುಗುಟ್ಟಿ ನೋಡುತ್ತಿದ್ದ. ತೀವ್ರ ಮುಜುಗರ, ಭಯದಿಂದ ಹೇಗೋ ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಳಿದು ಮನೆಗೆ ಬಂದೆ. ಘಟನೆಯಿಂದ ಮಾನಸಿಕವಾಗಿ ನೊಂದಿದ್ದೆ. ಪೋಷಕರ ಬಳಿ ವಿಷಯ ಹೇಳಿದಾಗ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿದರು. ಅವರ ಸಲಹೆ ಮೇರೆಗೆ ದೂರು ನೀಡುತ್ತಿರುವುದಾಗಿ ವಿದ್ಯಾರ್ಥಿನಿ ಉಲ್ಲೇಖಿಸಿದ್ದರು.