ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಬ್ರಿಡ್ಜ್ ನ ಸಿಮೆಂಟ್ ತುಂಡು ಬಿದ್ದ ಪರಿಣಾಮ ಕಾರಿನ ಗಾಜುಗಳು ಪುಡಿ ಪುಡಿಯಾಗಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದಿದೆ.
ಮೈಸೂರು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಬ್ರಿಡ್ಜ್ ನಿಂದ ಸಿಮೆಂಟ್ ಕಲ್ಲುಗಳು ಕಳಚಿ ಬಿದ್ದಿವೆ. ಕಾರು ಜಖಂಗೊಂಡಿದ್ದು, ಕಾರಿನ ಗಾಜುಗಳು ಪುಡಿ ಪುಡಿಯಾಗಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸ್ವಲ್ಪದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಮಾಲೀಕ ನವೀನ್ ರಾಜ್ ಹಾಗೂ ಕುಟುಂಬದವರು ನಮ್ಮ ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ರಸ್ತೆಯ ಪಿಲ್ಲರ್ ನಂ.393ರ ಬಳಿ ಈ ಘಟನೆ ನಡೆದಿದೆ. ಎಸ್ ಯುವಿ 700 ಹೊಸ ಕಾರು ಇದಾಗಿದ್ದು, ಖರೀದಿಸಿ ಇನ್ನೂ ಒಂದು ತಿಂಗಳೂ ಆಗಿರಲಿಲ್ಲ. ಸಿಮೆಂಟ್ ಕಲ್ಲುಗಳು ಬಿದ್ದ ರಭಸಕ್ಕೆ ಕಾರಿನ ಮೇಲ್ಭಾಗ ಹಾನಿಯಾಗಿದ್ದು, ಮುಂಭಾಗದ ಗಾಜು ಒಡೆದು ಹೋಗಿದೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.